ವೀರಾಜಪೇಟೆ, ಫೆ. 20: ಉತ್ತಮ ಪರಿಸರದ ವಾತಾವರಣ, ಹಸಿರೆಲೆ ಮರ ಗಿಡಗಳು ಹಾಗೂ ಸುತ್ತ ಮುತ್ತಲ ಪ್ರದೇಶದ ಶುಚಿತ್ವದಿಂದ ಪ್ರತಿಯೊಬ್ಬ ಮನುಷ್ಯನು ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಯ ಕರ್ನಾಟಕ ಸಂಘಟನೆ ಶುಚಿತ್ವದ ಕಾರ್ಯಕ್ರಮ ಹಮ್ಮಿಕೊಂಡಿರುವದು ಸಮಾಜ ಸೇವೆಯಲ್ಲಿ ಪ್ರಾಮಾಣಿಕತೆಯ ಸಂಕೇತ ಎಂದು ವಾಲಿಬಾಲ್ ಅಸೋಸಿಯೇಶನ್‍ನ ಜಿಲ್ಲಾ ಸಮಿತಿಯ ಅಧ್ಯಕ್ಷ ಬಲ್ಲಚಂಡ ಗೌತಮ್ ಅಭಿಪ್ರಾಯಪಟ್ಟರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಚಿತ್ವ ಶಿಬಿರದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಗೌತಮ್ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿರುವದರಿಂದ ಇದರಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.

ಅತಿಥಿಯಾಗಿ ಆಗಮಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಮಾತನಾಡಿ ಪಟ್ಟಣ ಪಂಚಾಯಿತಿ ಈ ಹಿಂದಿನಿಂದಲೇ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ ಎಂದು ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಸ್ವಚ್ಛತಾ ಶಿಬಿರದ ಕಾರ್ಯಕ್ರಮದಲ್ಲಿ ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಎಸ್.ಎಚ್.ಮಂಜುನಾಥ್, ಕುಂಞರ ಸುನು ಸುಬ್ಬಯ್ಯ, ಪಿ.ಎ.ಮಂಜುನಾಥ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ, ತಸ್ನೀಂ ಅಕ್ತರ್, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಟಿ.ಎಂ.ಯೋಗಿಶ್ ನಾಯ್ಡು, ಕೂಪದಿರ ಹರೀಶ್ ಮತ್ತಿತರರು ಹಾಜರಿದ್ದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ 240 ಬೆಡ್‍ಗಳ ಜಿಲ್ಲಾ ಮಟ್ಟದ ಆಸ್ಪತ್ರೆಗೆ ಸಮನಾಗಿದ್ದು ರೋಗಿಗಳಿಗೆ ಶಸ್ತ್ರ ಚಿಕಿತ್ಸೆ, ಇತರ ಎಲ್ಲ ಚಿಕಿತ್ಸೆಗಳಿಗೆ ಪ್ರತಿಯೊಂದು ಸೌಲಭ್ಯವನ್ನು ಕಲ್ಪಿಸಲಾಗಿದೆ. ಸುಮಾರು 14 ಎಕರೆ ಜಾಗವನ್ನು ಹೊಂದಿರುವ ಆಸ್ಪತ್ರೆಯ ಖಾಲಿ ಜಾಗ ಗಿಡ ಮರ ಕುರುಚಲು ಗಿಡಗಳಿಂದ ಕೂಡಿತ್ತು. ಸುಮಾರು 5ಎಕರೆ ಜಾಗವನ್ನು ಜೆಸಿಬಿ ಯಂತ್ರವನ್ನು ಬಳಸಿ ಇಂದು ಶುಚಿಗೊಳಿಸಲಾಗಿದ್ದರಿಂದ ಈಗ ಆಸ್ಪತ್ರೆಯ ಜಾಗ ವಿಶಾಲವಾಗಿ ಕಾಣುತ್ತಿದೆ. ಜೊತೆಗೆ ಆರೋಗ್ಯಕರ ಪರಿಸರ ಉಂಟಾಗಿದೆ. ಆಸ್ಪತ್ರೆಯ ಆಡಳಿತ ಅದರ ಸಭಾಂಗಣವನ್ನು ನಿರಂತರವಾಗಿ ಶುಚಿಯಾಗಿಡಲು ಪ್ರಯತ್ನಿಸಬೇಕು ಎಂದು ತಾಲೂಕು ಸಮಿತಿ ಅಧ್ಯಕ್ಷ ಅನಿಲ್ ಅಯ್ಯಪ್ಪ ತಿಳಿಸಿದರು.