ಮೂರ್ನಾಡು, ಫೆ. 20 : ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಂಘದ ಸದಸ್ಯರ ಸಹಕಾರ ಅತಿ ಮುಖ್ಯ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.

ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಇತರೆ ವಾಣಿಜ್ಯ ಬ್ಯಾಂಕ್‍ಗಳಂತೆ ಕೃಷಿ ಪತ್ತಿನ ಸಹಕಾರ ಸಂಘಗಳು ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸ್ಪರ್ಧೆಗಿಳಿಯುವದು ಅತ್ಯವಶ್ಯಕ ವಾಗಿದೆ. ಜಿಲ್ಲೆಯಲ್ಲಿ ಇತರ ಬ್ಯಾಂಕ್‍ಗಳ 160 ಶಾಖೆಗಳಿದ್ದು, ಹಿರಿಯರು ಕಟ್ಟಿ ಬೆಳೆಸಿಕೊಂಡು ಬಂದ ಸಹಕಾರಿ ಸಂಘಗಳು 16 ಮಾತ್ರ ಇವೆ. ಪ್ರತಿ ಹಳ್ಳಿಯಲ್ಲೂ ಸಂಘದ ಶಾಖೆಗಳು ಆರಂಭವಾಗಬೇಕು. ಕೇವಲ ಕೃಷಿ ಸಾಲಕ್ಕೆ ಮಾತ್ರ ಸಹಕಾರಿ ಸಂಘಗಳು ಮೀಸಲಾಗದೆ, ಇತರೆ ವ್ಯವಹಾರಗಳೊಂದಿಗೆ ಅಭಿವೃದ್ಧಿ ಕಾಣಬೇಕು ಎಂದು ತಿಳಿಸಿ ಯುವ ಜನತೆ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದುಕೊಂಡು ಸಕ್ರಿಯವಾಗಿ ಪಾಲ್ಗೊಂಡರೆ ಸಂಘಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉಪಾಧ್ಯಕ್ಷ ಕೇಟೋಳಿರ ಎಸ್. ಹರೀಶ್ ಪೂವಯ್ಯ ನೂತನ ಕಚೇರಿಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಕೊಡಗು ಜಿಲ್ಲೆ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮುಂಡಂಡ ಸಿ. ನಾಣಯ್ಯ ಗೋದಾಮು ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನೆರವಂಡ ಡಿ. ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ಎನ್.ಪಿ. ಮುತ್ತಣ್ಣ, ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಕೆ. ಅಪ್ಪಯ್ಯ, ಸಂಘದ ಮಾಜಿ ಅಧ್ಯಕ್ಷ ಎನ್.ಪಿ. ಕರುಂಬಯ್ಯ, ಸಿ.ಡಿ. ಅಣ್ಣಪ್ಪ, ಕೆ.ಎ. ಪುರುಪೋತ್ತಮ್, ವಿ.ಕೆ. ಸುಭಾಷ್, ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಡೇಪಂಡ ರವಿ ಅಪ್ಪಯ್ಯ, ನಿರ್ದೇಶಕರಾದ ನೆರವಂಡ ರಘು ದೇವಯ್ಯ, ಕೂಡಂಡ ಪ್ರಥ್ವಿ ಕಾವೇರಪ್ಪ, ಚೌರೀರ ಪ್ರಕಾಶ್ ಪಳಂಗಪ್ಪ, ತೆಕ್ಕಡೆ ಆರ್. ಪುರುಷೋತ್ತಮ್, ಹರೀಶ್ ಕುಮಾರ್, ಅಚ್ಚಪಂಡ ಭವಾನಿ ಲೋಕಾನಂದ, ಚೆಟ್ಟಿಮಾಡ ಶ್ಯಾಮಲ ಜಗದೀಶ್, ಸೂಪರ್ ವೈಸರ್ ಮೇಚಂಡ ಎ. ಚೇತನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಕ್ಕೇರಿಯಂಡ ಚೋಂದಕ್ಕಿ ಅಯ್ಯಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಶಶಿ ಮುತ್ತಣ್ಣ ಪ್ರಾರ್ಥಿಸಿ, ಪ್ರಥ್ವಿ ಕಾವೇರಪ್ಪ ಸ್ವಾಗತಿಸಿ, ಕಾರ್ಯನಿರ್ವಹಣಾಧಿಕಾರಿ ಕಿಕ್ಕೇರಿಯಂಡ ಚೋಂದಕ್ಕಿ ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿ, ಕೂಡಂಡ ಮುತ್ತಣ್ಣ ವಂದಿಸಿದರು.