ಮಡಿಕೇರಿ, ಫೆ. 20: ನೋಟು ರದ್ಧತಿ ಶ್ರೀಮಂತರ ಕಪ್ಪು ಹಣದ ವಿರುದ್ಧದ ಸಮರವಲ್ಲ, ಜನಸಾಮಾನ್ಯರ ವಿರುದ್ಧದ ನಗದು ಸಮರವಾಗಿದೆ ಎಂದು ಆರೋಪಿಸಿ ಸಿಪಿಐ(ಎಂ) ಪ್ರಚಾರಾಂದೋಲನ ಹಿನ್ನೆಲೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಸುದರ್ಶನ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು. ಈ ಸಂದರ್ಭ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಬೇಡಿಕೆಗಳು

ಡಿಸೆಂಬರ್ 30ರ ಗಡುವು ಮುಕ್ತಾಯವಾಗಿರುವದರಿಂದ ಜನರು ಕಷ್ಟಪಟ್ಟು ಸಂಪಾದಿಸಿ ಬ್ಯಾಂಕಿನಲ್ಲಿ ಇಟ್ಟಿರುವ ಅವರ ಸ್ವಂತ ಹಣವನ್ನು ವಾಪಸ್ ಪಡೆಯಲು ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಹಿಂಪಡೆಯಬೇಕು. ಸಾಮಾನ್ಯ ಕೃಷಿ ಚಟುವಟಿಕೆಗಳು ಏರುಪೇರಾಗಿ ರೈತರು ಸಂಕಷ್ಟ ಅನುಭವಿಸುತ್ತಿರುವದರಿಂದ ಅವರ ಸಾಲವನ್ನು ತುರ್ತಾಗಿ ಮನ್ನಾ ಮಾಡಬೇಕು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಗ್ರಾಮೀಣ ಕೆಲಸಗಾರರಿಗೆ ಹೆಚ್ಚುವರಿ ದಿನಗಳ ಕೆಲಸ ಒದಗಿಸಲು ಸಾಧ್ಯವಾಗುವಂತೆ ರಾಜ್ಯಗಳಿಗೆ ಎರಡು ಪಟ್ಟು ಅನುದಾನವನ್ನು ನೀಡಬೇಕು. ಅಮಾನ್ಯಗೊಳಿಸಲಾದ ನೋಟುಗಳನ್ನು ಬದಲಾಯಿಸಿಕೊಳ್ಳಲು ಅಥವಾ ಬ್ಯಾಂಕಿನಲ್ಲಿದ್ದ ತಮ್ಮ ಹಣವನ್ನು ಪಡೆಯಲು ಬ್ಯಾಂಕುಗಳ ಮುಂದೆ ಸಾಲು ನಿಂತು ಮೃತಪಟ್ಟವರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು.

ತಮ್ಮ ಉದ್ಯೋಗವನ್ನು ಹಾಗೂ ಜೀವನ ನಿರ್ವಹಣೆಯನ್ನು ಕಳೆದುಕೊಂಡವರಿಗೆ, ಮುಖ್ಯವಾಗಿ ಕೃಷಿ ಕೂಲಿಕಾರ್ಮಿಕರಿಗೆ ಹಾಗೂ ದಿನಗೂಲಿ ಕೆಲಸಗಾರರಿಗೆ ಪರಿಹಾರ ನೀಡಬೇಕು. ನಗದು ರೂಪದಲ್ಲೇ ವ್ಯವಹರಿಸುತ್ತಿದ್ದ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ, ವರ್ತಕರಿಗೆ, ಅವರ ಆರ್ಥಿಕ ಚಟುವಟಿಕೆಗಳು ಸ್ಥಗಿತ ಗೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ತೆರಿಗೆ ರಿಯಾಯಿತಿ ನೀಡಬೇಕು.

ಸಹಕಾರಿ ಬ್ಯಾಂಕುಗಳಲ್ಲಿ ಜಮಾ ಮಾಡುವ ಮತ್ತು ವಾಪಸ್ ಪಡೆಯುವ ಪ್ರಕ್ರಿಯೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ಹಿಂಪಡೆಯಬೇಕು. ಯಾವದೇ ಬ್ಯಾಂಕ್ ವಿರುದ್ಧ ದುವ್ರ್ಯವಹಾರದ ನಿರ್ದಿಷ್ಟ ಪ್ರಕರಣಗಳಿದ್ದರೆ, ಅವುಗಳ ವಿರುದ್ಧ ಕ್ರ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಆದರೆ ಗ್ರಾಮೀಣ ಭಾರತದ ಬೆನ್ನೆಲುಬು ಆಗಿರುವ ಸಹಕಾರಿ ಬ್ಯಾಂಕ್ ವ್ಯವಸ್ಥೆಯನ್ನು ನಾಶ ಮಾಡಬಾರದು.

ವರಮಾನದಲ್ಲಿ ಹಾನಿ ಅನುಭವಿಸಿದ ರಾಜ್ಯಗಳಿಗೆ ಕೇಂದ್ರದಿಂದ ಪರಿಹಾರ ನೀಡಬೇಕು. ಡಿಜಿಟಲ್ ವ್ಯವಹಾರ ಪದ್ಧತಿಯನ್ನು ಅನುಸರಿಸಲು ಜನರನ್ನು ಬಲವಂತ ಪಡಿಸಬಾರದು. ಎಲ್ಲಾ ರೇಷನ್ ಕಾರ್ಡುದಾರರಿಗೆ ರೇಷನ್ ವಿತರಣೆ ಮಾಡಬೇಕು. ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಕ್ರಮ ದಿಂದಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಜನ ರೇಷನ್‍ನಿಂದ ವಂಚಿತರಾಗಿ ದ್ದಾರೆ. ಈ ಷರತ್ತನ್ನು ಹಿಂಪಡೆಯಬೇಕು. ಎಲ್ಲಾ ನಿವೇಶನ ರಹಿತರಿಗೆ ಮನೆ-ನಿವೇಶನ ನೀಡಬೇಕು. ಬರ ನಿರ್ವಹಣೆಗೆ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ರೈತರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸ ಲಾಯಿತು. ಭರತ್ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.