ಮಡಿಕೇರಿ, ಫೆ. 20: ಪಾಲೆಮಾಡು ಕ್ರಿಕೆಟ್ ಕ್ರೀಡಾಂಗಣ ಹಾಗೂ ಸ್ಮಶಾನ ಜಾಗದ ವಿವಾದಗಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನೀಡಿದ ಭರವಸೆ ಯನ್ನು ಸ್ಮಶಾನಪರ ಹೋರಾಟಗಾರರು ತಿರಸ್ಕರಿಸಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆ ವಿಫಲತೆ ಕಾಣುವಂತಾಗಿದೆ.ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಸ್ಮಶಾನಪರ ಹೋರಾಟಗಾರರ ತಲಾ 6 ಮಂದಿ ಸಮಿತಿ ಸದಸ್ಯರ ಸಮಕ್ಷಮದಲ್ಲಿ ಸಂಧಾನ ಸಭೆ ನಡೆಯಿತು. ಈ ಸಂದರ್ಭ ಜಿಲ್ಲಾಧಿಕಾರಿಗಳು ಸ್ಮಶಾನಕ್ಕೆ ಜನಸಂಖ್ಯೆಗನುಗುಣವಾಗಿ ಕಾನೂನು ಪ್ರಕಾರ ಅರ್ಧ ಎಕರೆ ಜಾಗ ನೀಡುವದಾಗಿ ಹೇಳಿದ ಭರವಸೆಯನ್ನು ಸ್ಮಶಾನಪರ ಹೋರಾಟಗಾರರು ತಿರಸ್ಕರಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಕ್ರೀಡಾಂಗಣ ಹಾಗೂ ಸ್ಮಶಾನಪರ ಹೋರಾಟಗಾರರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅನುವು ಮಾಡಿಕೊಟ್ಟರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಜಿಲ್ಲಾ ಸಂಯೋಜಕ ಪೃಥ್ವಿ ದೇವಯ್ಯ ಮಾತನಾಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸರ್ವೆ ನಂ. 167/1ಎಯಲ್ಲಿ 12.70 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಆದರೆ ಇದರಲ್ಲಿ 2 ಎಕರೆಯಷ್ಟು ಜಾಗ ಒತ್ತುವರಿಯಾಗಿದೆ. ಇದರಿಂದಾಗಿ ಕಾಮಗಾರಿ ನಡೆಸಲು ತೊಂದರೆಯಾಗಿದೆ. ಒತ್ತುವರಿ ಜಾಗವನ್ನು ತೆರವುಗೊಳಿಸಿಕೊಡುವಂತೆ ಬೇಡಿಕೆಯಿಟ್ಟರು.
ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳಿ ಮಾತನಾಡಿ, ಪಾಲೆಮಾಡು ಪೈಸಾರಿಯಲ್ಲಿ ಬಡಜನತೆ 10 ವರ್ಷಗಳಿಂದ ವಾಸವಾಗಿದ್ದಾರೆ. ಅಲ್ಲಿನ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವದು ಸರ್ಕಾರದ ಕರ್ತವ್ಯ ವಾಗಿದೆ. ಸೌಲಭ್ಯವನ್ನು ಕಲ್ಪಿಸುತ್ತಿದೆ. ವಾಟೆಕಾಡು ಗ್ರಾಮದಲ್ಲಿ ಸ್ಮಶಾನಕ್ಕಾಗಿ ಜಿಲ್ಲಾಡಳಿತ 4 ಎಕರೆ ಜಾಗ ನೀಡಿದೆ. ಈ ಜಾಗ ಪಾಲೆಮಾಡು ವಿನಿಂದ ಅರ್ಧ ಕಿ.ಮೀ. ದೂರವೂ ಇಲ್ಲ. ಹೀಗಿರುವಾಗ ಕೊಡಗಿಗೆ ಅಪರೂಪವಾಗಿ ದೊರೆತ ಕ್ರಿಕೆಟ್ ಕ್ರೀಡಾಂಗಣದ ಜಾಗದಲ್ಲಿಯೇ ಸ್ಮಶಾನ ಬೇಕೆನ್ನುವದು ಸ್ವಪ್ರತಿಷ್ಠೆಯ ಭಾವನೆಯಾಗಿದೆ ಎಂದು ಹೇಳಿದರು.
ಕ್ರೀಡಾಂಗಣ ಪರ ಸಮಿತಿ ಸದಸ್ಯ ಜಯನಂಜಪ್ಪ ಮಾತನಾಡಿ, ಕ್ರೀಡಾಂಗಣ ಜಾಗವನ್ನು ಅತಿಕ್ರಮಣ ಮಾಡಿದವರನ್ನು ತೆರವುಗೊಳಿಸಬೇಕು. ಕ್ರೀಡಾಂಗಣದ
(ಮೊದಲ ಪುಟದಿಂದ) ಕಾಮಗಾರಿಗೆ ಅನುವು ಮಾಡಿಕೊಡ ಬೇಕು ಎಂದು ಒತ್ತಾಯಿಸಿದರು.
ಹೊದ್ದೂರು ಗ್ರಾ.ಪಂ. ಅಧ್ಯಕ್ಷ ದಿನೇಶ್ ಮಾತನಾಡಿ, ಕ್ರೀಡಾಂಗಣ ನಿರ್ಮಾಣವಾದಲ್ಲಿ ಕ್ರೀಡಾಪಟುಗಳಿಗೆ ಉಪಯೋಗವಾಗಲಿದೆ. ಪಾಲೆಮಾಡು ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವದು ಸರ್ಕಾರದ ಕರ್ತವ್ಯ ಎಂದರು.
ಪಾಲೆಮಾಡು ನಿವಾಸಿ ಜನಾರ್ಧನ, ಕೆ. ನಂಜಪ್ಪ ಕ್ರೀಡಾಂಗಣದ ಅನುಕೂಲತೆಯ ಬಗ್ಗೆ ಗಮನ ಸೆಳೆದರು.
ಸ್ಮಶಾನಪರ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟಗಾರ ಅಮೀನ್ ಮೊಹಿಸಿನ್ ಮಾತನಾಡಿ, ಕ್ರಿಕೆಟ್ ಸಂಸ್ಥೆಗೆ ವಿರೋಧವಿಲ್ಲ. ಒಣಪ್ರತಿಷ್ಠೆಯೂ ಇಲ್ಲ. ಸಾಮಾಜಿಕ ಕಳಕಳಿ ಇದೆ. 2010-11ರಲ್ಲಿಯೇ ಪಾಲೆಮಾಡು ನಿವಾಸಿಗಳಿಗೆ ಸ್ಮಶಾನ ಜಾಗಕ್ಕೆ ಸ್ಕೆಚ್ ಮಾಡಿಕೊಡಲಾಗಿದೆ. ಸ್ಕೆಚ್ ದುರಸ್ಥಿ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಆದರೆ ಒಂದೇ ವರ್ಷದಲ್ಲಿ ಕ್ರಿಕೆಟ್ ಸಂಸ್ಥೆಗೆ ಜಾಗ ನೀಡಿ ಸ್ಕೆಚ್ ದುರಸ್ಥಿ ಮಾಡಿಕೊಡಲಾಗಿದೆ. ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಇನ್ನೊಂದು ನ್ಯಾಯವಾಗಿದೆ. ಸ್ಮಶಾನದಲ್ಲಿ 45 ಶವ ಹೂತುಹಾಕಲಾಗಿದ್ದು, ಪಾಲೆಮಾಡು ನಿವಾಸಿಗಳಿಗೆ ಅಲ್ಲಿನ ಸ್ಮಶಾನದ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಕ್ರಿಕೆಟ್ ಸಂಸ್ಥೆಗೆ ಬೇರೆಡೆಯಲ್ಲಿ ಜಾಗ ಕೊಡುವಂತೆ ಆಗ್ರಹಿಸಿದರು.
ಹೋರಾಟಗಾರ ಮೊಣ್ಣಪ್ಪ ಮಾತನಾಡಿ, 2008ರಿಂದ ಸ್ಮಶಾನವನ್ನು ಬಳಕೆ ಮಾಡಲಾಗುತ್ತಿದೆ. ಅಂದಿನಿಂದಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, 2009ರಲ್ಲಿ 4 ಎಕರೆ ಜಾಗ ಮಂಜೂರು ಮಾಡಲಾಗಿದೆ. ಸ್ಕೆಚ್ ದುರಸ್ತಿ ಮಾಡಿಕೊಡಲು ವಿಳಂಬವಾಗಿದ್ದು, ಇದು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯಾಗಿದೆ. ಈಗಿರುವ ಸ್ಮಶಾನದಲ್ಲಿಯೇ 2 ಎಕರೆ ಜಾಗ ನೀಡುವಂತೆ ಒತ್ತಾಯಿಸಿದರು.
ಹೊದ್ದೂರು ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿ, 2008ರಿಂದ 2015ರವರೆಗೆ ಸ್ಕೆಚ್ ದುರಸ್ತಿ ಮಾಡಲು ವಿಳಂಬವಾಗಿದೆ. ಹಿಂದಿನ ತಹಶೀಲ್ದಾರ್ ಕುಂಞಮ್ಮ ಹಾಗೂ ಕಂದಾಯಾಧಿಕಾರಿಯಾಗಿದ್ದ ವಿನು ಸರ್ವೆ ಮಾಡಿದಾಗ ಸ್ಮಶಾನಕ್ಕೆ ಅಲ್ಲಿಯೇ ಜಾಗ ನೀಡುವದಾಗಿ ಭರವಸೆ ನೀಡಿದ್ದರು. 300ಕ್ಕೂ ಅಧಿಕ ಬಡ ಕುಟುಂಬಗಳು ವಾಸ ಮಾಡುತ್ತಿದೆ. ಅಲ್ಲೇ 2 ಎಕರೆ ಸ್ಮಶಾನ ಜಾಗಬೇಕು ಎಂದು ಆಗ್ರಹಿಸಿದರು. ವಕೀಲ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯೆ ಕೆ.ಆರ್. ವಿದ್ಯಾಧರ ಮಾತನಾಡಿ, ಕ್ರಿಕೆಟ್ ಸಂಸ್ಥೆ ಹಿಂಬಾಗಿಲ ಮೂಲಕ ಪ್ರವೇಶಿಸಿ ಜಾಗ ಪಡೆದುಕೊಂಡಿದೆ ಎಂದು ಆರೋಪಿಸಿ ಹಿಂದಿನ ಜಿಲ್ಲಾಧಿಕಾರಿ ನೀಡಿದ ಆದೇಶವನ್ನು ಪುನರ್‍ಪರಿಶೀಲಿಸಿ ಆ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಸಮಿತಿಯ ಸದಸ್ಯರಾದ ಡಿ.ಪಿ. ನಿರ್ವಾಣಪ್ಪ, ಪ್ರೇಮ್‍ಕುಮಾರ್, ಜಯಪ್ಪ ಹಾನಗಲ್ ಮಾತನಾಡಿ ಜಿಲ್ಲಾಡಳಿತ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಜಿಲ್ಲಾಡಳಿತದಿಂದ ತಪ್ಪು ನಡೆದಿದ್ದು, ಸರಿಪಡಿಸಿ ಸ್ಮಶಾನ ಜಾಗ ನೀಡುವಂತೆ ಒತ್ತಾಯಿಸಿದರು.
ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಕೊಡಗು ಜಿಲ್ಲೆ ಹಾಕಿ ಕ್ರೀಡೆಗೆ ಹೆಸರಾಗಿದ್ದು, ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ತಂಡದಲ್ಲಿ ಕೊಡಗಿನ ಬಡವರ ಮಕ್ಕಳೇ ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ಸಂಸ್ಥೆಗೆ ಸರ್ಕಾರ ಜಾಗ ನೀಡಿದ್ದು, ಎಲ್ಲರಿಗೂ ತರಬೇತಿ ನೀಡಬೇಕು. ಕ್ರಿಕೆಟ್ ಸಂಸ್ಥೆಯಿಂದ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಬಡವರ ಮಕ್ಕಳಿಗೂ ತರಬೇತಿ ನೀಡುವ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ನಿರ್ಣಯ ಕೈಗೊಳ್ಳಬೇಕು. ಕ್ರಿಕೆಟ್ ಕ್ರೀಡಾಂಗಣ ಹಾಗೂ ಸ್ಮಶಾನಕ್ಕೆ ಜಾಗ ಎರಡೂ ಆಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಗ್ರಾಮದಲ್ಲಿ ಸಾಮರಸ್ಯ, ಶಾಂತಿ ಇರಬೇಕು. ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವದು ಪೊಲೀಸ್ ಇಲಾಖೆ ಜವಾಬ್ದಾರಿ ಯಾಗಿದೆ ಎಂದರು.
ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಮಾತನಾಡಿ, ಸರ್ವೆ ನಂ, 167/1ರಲ್ಲಿ ಸರ್ವೆ ಮಾಡಲಾಗಿದೆ. ಪಾಲೆಮಾಡು ವ್ಯಾಪ್ತಿಯಲ್ಲಿ 253 ಕುಟುಂಬಗಳಿವೆ. ಒಟ್ಟು 985 ಜನಸಂಖ್ಯೆ ಪಾಲೆಮಾಡಿನಲ್ಲಿದೆ. ಹೊದ್ದೂರು ಗ್ರಾಮಕ್ಕೆ 5 ಸಮುದಾಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸ್ಮಶಾನ ಜಾಗ ಕಾಯ್ದಿರಿಸಲಾಗಿದೆ ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಮಾತನಾಡಿ, ಹುಟ್ಟು ಆಕಸ್ಮಿಕ. ಸರ್ಕಾರ ದಲಿತರು ಹಾಗೂ ಬಡವರ ಪರ ಕೆಲಸ ಮಾಡುತ್ತಿದೆ. ಎಲ್ಲಾ ಜನಾಂಗದವರು ಹಾಗೂ ಸಂಪ್ರದಾಯದವರನ್ನು ಸೇರಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯ ಕೈಗೊಂಡಾಗ ಕೆಲಸ ಲಾಭ. ಇನ್ನು ಕೆಲವರಿಗೆ ಅನ್ಯಾಯ ಆಗಬಹುದು. ಎಲ್ಲವನ್ನೂ ಸರಿದೂಗಿಸಿ ಕೆಲಸ ಮಾಡಬೇಕಾಗಿದೆ. ಪಾಲೆಮಾಡಿನ ಜನಸಂಖ್ಯೆಯನ್ನು ಆದರಿಸಿ ಕಾನೂನು ಪ್ರಕಾರ 1000 ಜನಸಂಖ್ಯೆಗೆ 18,000 ಚದರ ಅಡಿ ಜಾಗವನ್ನು ಸ್ಮಶಾನಕ್ಕೆ ನೀಡಲಾಗುವದು. ಅಂದರೆ ಅರ್ಧ ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಲಾಗುವದು ಎಂದು ಹೇಳಿದರು. ಈ ಸಂದರ್ಭ ಸ್ಮಶಾನಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ ಇದು ಸಾಧ್ಯವಿಲ್ಲ. ಸ್ಮಶಾನಕ್ಕೆ ಎರಡು ಎಕರೆ ಜಾಗ ಮೀಸಲಿಡುವಂತೆ ಒತ್ತಾಯಿಸಿದರು. ಅರ್ಧ ಎಕರೆ ಜಾಗ ನೀಡುವದಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿ ಸಭೆ ಬರ್ಖಾಸ್ತುಗೊಳಿಸುವದಾಗಿ ತಿಳಿಸಿ ತೆರಳಿದರು. ಈ ಸಂದರ್ಭ ಸ್ಮಶಾನಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕೇಳಿಬಂದಿತು.
ಸಭೆಯಲ್ಲಿ ತಹಶೀಲ್ದಾರ್ ಕುಸುಮಾ, ಪೊಲೀಸ್ ವೃತ್ತ ನಿರೀಕ್ಷಕರಾದ ಮೇದಪ್ಪ, ಪ್ರದೀಪ್ ಕುಮಾರ್, ಅಧಿಕಾರಿಗಳಾದ ಭರತ್, ಶಿವಪ್ರಸಾದ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.