ಕುಶಾಲನಗರ, ಫೆ 21: ಮಠ ಮಾನ್ಯಗಳು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸೇವೆ ಸಲ್ಲಿಸುವದರೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವದು ಶ್ಲಾಘನೀಯ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಸಮೀಪದ ತೊರೆನೂರು ವಿರಕ್ತ ಮಠದಲ್ಲಿ ಚರಮೂರ್ತಿ ಮಹಾಂತಸ್ವಾಮೀಜಿ ಅವರ 5ನೇ ಪುಣ್ಯ ಸಂಸ್ಮರಣೋತ್ಸವ ಹಾಗೂ ನೂತನ ಗದ್ದಿಗೆ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಮಠಗಳು ಜನರಲ್ಲಿ ಉತ್ತಮ ಸಂಸ್ಕಾರ, ಧಾರ್ಮಿಕ ಚಿಂತನೆ ಬೆಳೆಸುವ ಮೂಲಕ ಅರಿವಿನ ಜ್ಯೋತಿ ಯನ್ನು ಬೆಳಗಿಸುತ್ತಿವೆ ಎಂದರು.
ಡಿಂಡುಗಾಡು ವಿರಕ್ತಮಠದ ಅಪ್ಪಾಜಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳುವ ಮೂಲಕ ತಮ್ಮನ್ನು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಸಾರ್ಥಕ ಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಮನೆಹಳ್ಳಿ ತಪೋವನದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತೊರೆನೂರು ಮಠದ ಚರಮೂರ್ತಿ ಸ್ವಾಮೀಜಿ ಸಹೃದಯಿ ಯಾಗಿದ್ದು, ಜನಪರ ಚಿಂತನೆ ಹೊಂದಿದ್ದರು ಎಂದÀು ತಿಳಿಸಿದರು. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಎಚ್.ಡಿ.ಕೋಟೆ ಸಂತೆಸರಗೂರಿನ ಮಹಾದೇವಸ್ವಾಮೀಜಿ, ಚಿನ್ಮಯಿ ಮಠದ ಜಯದೇವ ಸ್ವಾಮೀಜಿ, ಕುಶಾಲನಗರ ಎಪಿಸಿಎಂಎಸ್ಸಿ ಅಧ್ಯಕ್ಷ ಎಚ್.ಬಿ. ಚಂದ್ರಪ್ಪ ಮತ್ತಿತರರು ಹಾಜರಿದ್ದರು. ನೆರೆದಿದ್ದ ಭಕ್ತರಿಗೆ ಮಠದ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.