ವೀರಾಜಪೇಟೆ, ಫೆ. 20: ಸಮಾಜವು ಮಹಿಳೆಯರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊರಬೇಕಾಗಿದೆಯೆಂದು ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಂ. ನಾಗರಾಜು ಹೇಳಿದ್ದಾರೆ.
ವೀರಾಜಪೇಟೆ ಸಮೀಪದ ಪೆರಂಬಾಡಿಯಲ್ಲಿರುವ ಶಂಷುಲ್ ಉಲಮಾ ಮಹಿಳಾ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವೀರಾಜಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ “ಮಹಿಳೆ ಮತ್ತು ಕಾನೂನು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾನೂನಿನ ಹೊರತಾಗಿಯೂ ಭ್ರೂಣ ಹತ್ಯೆಯಂತಹ ಕೃತ್ಯಗಳು ನಡೆಯುತ್ತಿರುವದು ವಿಷಾದನೀಯ. ಮಹಿಳೆಯರ ಸಂರಕ್ಷಣೆಗೆ ಕಾನೂನುಗಳ ಅರಿವು ಹೆಚ್ಚು ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಮಾತನಾಡಿ ಕಾನೂನು ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೂ ಅಗತ್ಯವಾಗಿದೆ. ಮಹಿಳೆಯರು ಸಮಾಜದಲ್ಲಿ ಪುರುಷರಿಗೆ ಸಮಾನವಾದ ಸ್ಥಾನಮಾನವನ್ನು ಹೊಂದಿದ್ದಾರೆ. ಮಹಿಳೆಯರು ಕಾನೂನಿನ ನೆರವಿನಿಂದ ದೌರ್ಜನ್ಯ ಮುಕ್ತರಾಗಬೇಕು ಎಂದರು. ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎನ್. ಗೋಪಾಲ ಕೃಷ್ಣ ಕಾಮತ್, ಹಿರಿಯ ವಕೀಲೆ ಅನುಪಮ ಕಿಶೋರ್, ಕೆ.ವಿ. ಸುನಿಲ್ ಮಾತನಾಡಿದರು. ಶಂಷುಲ್ ಉಲಮಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಎಂ. ಬಷೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವ್ಯವಸ್ಥಾಪಕ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್, ಕಾರ್ಯದರ್ಶಿ ಎ.ಪಿ. ಮುಹಮ್ಮದ್ ಮಣಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತಾಧಿಕಾರಿ ಪಿ.ಎ. ನಾರಾಯಣ್ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕಿ ಎಸ್. ಸಿಂಧು ವಂದಿಸಿದರು.