ಮಡಿಕೇರಿ, ಫೆ. 20: ರಾಜ್ಯ ಕಾಂಗ್ರೆಸ್ ಸರ್ಕಾರದ ಕೆಲವು ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಪಕ್ಷದ ಹಲವು ಮುಖಂಡರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿ, ಅಂತಹವರನ್ನು ಸರ್ಕಾರದಿಂದ ಕೈ ಬಿಟ್ಟು, ಶಾಸಕಾಂಗ ಪಕ್ಷದಿಂದ ಅಮಾನತುಗೊಳಿಸಿ ನಿಷ್ಷಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಭ್ರಷ್ಟತೆಯ ಕಳಂಕವಿಲ್ಲದೇ ರಾಜ್ಯ ಸರ್ಕಾರದ ಯಾವದೇ ತೀರ್ಮಾನಗಳಿಲ್ಲ ಎನ್ನುವಂತಾಗಿದೆ ಎಂದು ಆರೋಪಿಸಿದ ಜಿಲ್ಲಾ ಬಿಜೆಪಿ, ರಾಜ್ಯದಲ್ಲಿ ಐದಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಮನೆಗಳ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲ ಯದ ಧಾಳಿ ನಡೆದಿದೆ. ಇತ್ತೀಚೆಗೆ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಧಾಳಿ ನಡೆದಿದ್ದು, ಅಪಾರ ಪ್ರಮಾಣದ ನಗದು ಮತ್ತು ಆಸ್ತಿಯ ಮಾಹಿತಿಗಳು ಪತ್ತೆಯಾಗಿವೆ.

ಮತ್ತೊಬ್ಬ ಕಾಂಗ್ರೆಸ್ ಶಾಸಕ ಎಂ.ಟಿ.ಬಿ ನಾಗರಾಜ್ ಅವರ ನಿವಾಸದ ಮೇಲೆ

(ಮೊದಲ ಪುಟದಿಂದ) ಧಾಳಿ ನಡೆದ ಸಂದರ್ಭದಲ್ಲಿ ಸುಮಾರು ರೂ. 140 ಕೋಟಿಗೂ ಹೆಚ್ಚು ನಗದು ಮತ್ತು ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಮುಖ್ಯಮಂತ್ರಿಗಳಿಗೆ ಆಪ್ತರಾದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ನಿವಾಸದ ಮೇಲೆ ನಡೆದ ಧಾಳಿಯ ಸಂದರ್ಭದಲ್ಲಿ ವಶಪಡಿಸಿ ಕೊಳ್ಳಲಾದ ಡೈರಿಯಲ್ಲಿ ಸ್ಟೀಲ್ ಬ್ರಿಡ್ಜ್ ಯೋಜನೆಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ಸಂದಾಯವಾದ ರೂ. 65 ಕೋಟಿ ಲಂಚದ ಪ್ರಸ್ತಾಪವಿರುವದು ವರದಿಯಾಗಿದೆ.

ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿವಾಸದ ಮೇಲೆ ನಡೆದ ಧಾಳಿಯ ಸಂದರ್ಭದಲ್ಲಿ ಕೋಟ್ಯಾಂತರ ರೂ.ಗಳ ನಗದು ಪತ್ತೆಯಾಗಿರುವದು ಅನುಮಾನಾಸ್ಪದ ವ್ಯವಹಾರಗಳ ಕುರುಹಾಗಿದೆ. ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಧಾಳಿ ನಡೆದ ಸಂದರ್ಭದಲ್ಲೂ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದ್ದು, ವ್ಯಾಪಕ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಆದರೆ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಬದಲು ಆರೋಪಗಳನ್ನು ನಿರಾಕರಿಸು ತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಬಹುತೇಕ ಪ್ರಕರಣಗಳು ತೀರಾ ಗಂಭೀರ ಸ್ವರೂಪದ್ದಾಗಿದ್ದರೂ ಮುಖ್ಯಮಂತ್ರಿಗಳು ಈ ಪ್ರಕರಣಗಳನ್ನು ತೀರಾ ಹಗುರವಾಗಿ ಪರಿಗಣಿಸುತ್ತಿರುವದು ಆತಂಕದ ಸಂಗತಿಯಾಗಿದೆ. ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆದು ವಿಚಾರಣೆಗೆ ಆದೇಶ ನೀಡಬೇಕಾಗಿತ್ತು. ಇಬ್ಬರು ಶಾಸಕರ ಆರ್ಥಿಕ ಚಟುವಟಿಕೆಗಳ ಕುರಿತು ಸ್ಪಷ್ಟೀಕರಣವನ್ನೂ ಕೇಳಲು ಮುಂದಾದಾಗ ಮುಖ್ಯಮಂತ್ರಿಗಳ ನಡವಳಿಕೆ ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ಹುದ್ದೆಯಿಂದ ವಜಾ ಮಾಡದೇ ಮುಂದುವರಿಸಿರುವದು ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರು ಬಂಧಿತರಾಗಿ ಇದೀಗ ಜಾಮೀನು ಪಡೆದಿದ್ದು, ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಯತ್ನಿಸುತ್ತಿರುವದು ಆಘಾತಕಾರಿ ಸಂಗತಿಯಾಗಿದೆ. ಇಂತಹ ಗಂಭೀರ ಪ್ರಕರಣಗಳು ವರದಿಯಾಗಿದ್ದರೂ ಸ್ವತಃ ಮುಖ್ಯಮಂತ್ರಿಗಳು ಈ ಕುರಿತು ಯಾವದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿರುವದು ಅವರೂ ಈ ಹಗರಣದಲ್ಲಿ ಪಾಲುದಾರರಾಗಿ ದ್ದಾರೆಯೇ ಎಂದು ಅನುಮಾನದಿಂದ ನೋಡುವಂತಾಗಿದೆ. ತಮ್ಮ ಆಪ್ತರಲ್ಲಿ ಒಬ್ಬರಾದ ಗೋವಿಂದರಾಜ್ ಅವರ ನಿವಾಸದ ಮೇಲೆ ಧಾಳಿ ನಡೆದ ಬಗ್ಗೆಯಾಗಲಿ ಅಥವಾ ಅಲ್ಲಿ ಡೈರಿ ಸಿಕ್ಕಬಗ್ಗೆಯಾಗಲಿ ಮುಖ್ಯಮಂತ್ರಿಗಳು ಯಾವದೇ ಸ್ಪಷ್ಟನೆ ನೀಡದೇ ಬಿಜೆಪಿ ವಿರುದ್ಧ ಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿದರು.

ಬೇಡಿಕೆಗಳು

ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ತಕ್ಷಣ ವಜಾ ಮಾಡಬೇಕು, ಹಣಕಾಸು ಅಕ್ರಮಗಳನ್ನು ಎಸಗಿರುವದು ಸಾಬೀತಾಗಿರುವದರಿಂದ ಇಬ್ಬರು ಕಾಂಗ್ರೆಸ್ ಶಾಸಕರಿಗೆ ನೋಟೀಸ್ ಜಾರಿ ಮಾಡಿ ಅವರನ್ನು ಶಾಸಕಾಂಗ ಪಕ್ಷದಿಂದ ಅಮಾನತು ಗೊಳಿಸಬೇಕು, ಎಲ್ಲಾ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿ ಪ್ರಕರಣಗಳಿಗೆ ತಾತ್ವಿಕ ಅಂತ್ಯ ಕಾಣಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.