ವೀರಾಜಪೇಟೆ, ಫೆ. 20: ಇಲ್ಲಿಗೆ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವಚಿಂತನ ಗೋಷ್ಠಿಯ 164ನೇ ಕಿರಣ ಇತ್ತೀಚೆಗೆ ನಡೆಯಿತು.
ವೀರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ಪ್ರಾಂಶುಪಾಲ ಬಿ.ಎಸ್. ದಿಲಿ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಎಸ್.ವಿ. ನರಸಿಂಹನ್ ಉಪನ್ಯಾಸ ನೀಡಿ, ಸಂಗೀತದ ಬಗ್ಗೆ ಆಸಕ್ತಿಯಿರುವವರು ಹಲವರು. ಸಂಗೀತದ ಬಗ್ಗೆ ವಿಸ್ತಾರ ಹಾಗೂ ಶಾಸ್ತ್ರೋಕ್ತ ಸಂಶೋಧನೆ ನಡೆಸಿ ಸಂಗೀತಗಾರರಾದವರು ಕೆಲವರು ಮಾತ್ರ. ಹಾಗೆಯೇ ಸಂಶೋಧಕ ರೆಲ್ಲರು ಸಂಗೀತಗಾರರು ಆಗುವದು ಸಾಧ್ಯವಿಲ್ಲ. ಸ್ವರಶುದ್ಧತೆ ಶ್ರುತಿ ಬದ್ಧತೆ ಹಾಗೂ ಲಯ ಬದ್ಧತೆ ಸಂಗೀತದ ಬೆನ್ನೆಲುಬು. ಭೂಮಿಯ ಮೇಲೆ ಸಂಗೀತದ ಇಂಪನ್ನು ಮೊಟ್ಟ ಮೊದಲಿಗೆ ಹರಡಿದ ಜೀವಿಗಳೆಂದರೆ ಅದು ಪಕ್ಷಿಗಳು. ಸಂಗೀತವನ್ನು ಆಸ್ವಾದಿಸುವದು ಮಾನವ ಸಹಜವಾದ ಗುಣ. ಶಾಸ್ತ್ರೀಯ ಸಂಗೀತದ ಅರಿವಿಲ್ಲದ ಎಷ್ಟೋ ಜನರು ಸಂಗೀತವನ್ನು ಆಸ್ವಾದಿಸು ತ್ತಾರೆ. ಭಗವದ್ಗೀತೆಯ ಪ್ರಕಾರ ಬದಲಾವಣೆಯೆಂಬದು ಜಗತ್ತಿನ ನಿಯಮ ಎಂದರು.
ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.