ಸೋಮವಾರಪೇಟೆ, ಫೆ. 21: ಕುಡಿಯುವ ನೀರಿನ ನಿರ್ವಹಣೆಯನ್ನು ಹೊಂದಿರುವ ಗುತ್ತಿಗೆದಾರರು ಐದು ವರ್ಷಗಳ ಕಾಲ ಸಾರ್ವಜನಿಕರಿಗೆ ಯಾವದೇ ಸಮಸ್ಯೆ ಎದುರಾಗದಂತೆ ನಿರ್ವಹಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಸೂಚಿಸಿದರು.
ಸೋಮವಾರಪೇಟೆ ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆ ಇಂದು ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕಿನ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಮುಗಿದಿದ್ದು, ತಕ್ಷಣವೇ ಗುತ್ತಿಗೆದಾರರು ಇದರ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಬೇಕು. ಕಿರು ನೀರಾವರಿ ಯೋಜನೆಯಡಿಯಲ್ಲಿ 19 ಕೆರೆಗಳು ಇದ್ದು, ಇದರಲ್ಲಿ 6 ಕೆರೆಗಳನ್ನು ಹೂಳೆತ್ತುವಂತೆ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವ್ಯಾಪ್ತಿಗೆ ಒಳಪಡುವ 11 ಕೆರೆಗಳನ್ನು ತಲಾ ರೂ. 2.65 ಲಕ್ಷ ವೆಚ್ಚದಲ್ಲಿ ಹೂಳೆತ್ತುವಂತೆ ಸಂಬಂಧಿಸಿದ ಅಭಿಯಂತರರಿಗೆ ಸೂಚನೆ ನೀಡಿದರು.
ಪ್ರಗತಿ ಪರಿಶೀಲನೆ ಸಭೆಗೆ ಅಬಕಾರಿ ನಿರೀಕ್ಷಕರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತಹಶೀಲ್ದಾರ್ ನಿರಂತರವಾಗಿ ಗೈರು ಹಾಜರಾಗುತ್ತಿದ್ದು, ಕಾರಣ ಕೇಳಿ ನೋಟಿಸು ನೀಡುವಂತೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಸಭೆಗೆ ತಿಳಿಸಿದರು. ಕಾಫಿ ಮಂಡಳಿ ಬಿಎಸ್.ಎನ್.ಎಲ್. ಸರ್ವೇ ಇಲಾಖೆ ಸೇರಿದಂತೆ 13 ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವದರಿಂದ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಧ್ಯಕ್ಷೆ ಪುಷ್ಪ ರಾಜೇಶ್ ಸಭೆಗೆ ತಿಳಿಸಿದರು.
ತಾಲೂಕಿನ ಹಲವೆಡೆ ರೆಸಾರ್ಟ್ ಮತ್ತು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರಾಕ್ಷೇಪಣ ಪತ್ರ ನೀಡುವಾಗ ಎಚ್ಚರಿಕೆಯನ್ನು ವಹಿಸಬೇಕೆಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಭ್ರಷ್ಠಾಚಾರದ ಆರೋಪಗಳು ಕೇಳಿ ಬರುತ್ತಿವೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಹಾಗೂ ಕಚೇರಿ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಕಂಡುಬರುತ್ತಿಲ್ಲ. ಸಮಾಜದಲ್ಲಿ ಗೌರವಾನ್ವಿತ ಹುದ್ದೆಯನ್ನು ಹೊಂದಿರುವ ಶಿಕ್ಷಕರೂ ಸಹ ಲಂಚವನ್ನು ನೀಡಿ ಕೆಲಸ ಮಾಡಿಕೊಳ್ಳುವದು ಅಪರಾಧ ಎಂದು ಅಭಿಮನ್ಯು ಕುಮಾರ್ ಹೇಳಿದರು.
ವೇದಿಕೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ, ಕೆ.ಡಿ.ಪಿ. ನಾಮನಿರ್ದೇಶಿತ ಸದಸ್ಯರುಗಳಾದ ಭುವನೇಂದ್ರ, ಧರ್ಮಪ್ಪ, ಬಾಲಕೃಷ್ಣ ರೈ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.