ಕುಶಾಲನಗರ, ಫೆ. 22: ಸೋಮವಾರಪೇಟೆ ತಾಲೂಕಿನ ಕಾಂಗ್ರೆಸ್ ನಾಯಕರು ದಲಿತರ ಹೆಸರಿನಲ್ಲಿ ರಾಜಕೀಯ ಮಾಡುವದರೊಂದಿಗೆ ಜೆಡಿಎಸ್ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೂಡಿಗೆಯ ಜೆಡಿಎಸ್ ಮುಖಂಡ ಕೆ.ಎಸ್. ಕಾಂತರಾಜು ಆರೋಪಿಸಿದ್ದಾರೆ.
ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದದ ಮೂಲಕ ಅಧಿಕಾರ ಗಳಿಸಿದೆ. ಇದಕ್ಕೂ ಮೊದಲು ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕ ಬಿ.ಎ. ಜೀವಿಜಯ ಅವರೊಂದಿಗೆ ಸಮಾಲೋಚನೆ ನಡೆಸಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡು ಅಂತಿಮ ಕ್ಷಣದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾಂಗ್ರೆಸ್ನ ಈ ನಿಲುವನ್ನು ಖಂಡಿಸಿದ ಜೀವಿಜಯ ಅವರನ್ನು ಕಾಂಗ್ರೆಸ್ ನಾಯಕ ಕೆ.ಎಂ. ಲೋಕೇಶ್ ದಲಿತ ವಿರೋಧಿ ಎಂದು ಬಿಂಬಿಸುತ್ತಿರುವದು ಖಂಡನೀಯ ವಿಚಾರವಾಗಿದೆ ಎಂದರು.
ಪಕ್ಷದ ಬಿ.ಡಿ. ಅಣ್ಣಯ್ಯ ಮಾತನಾಡಿ, ಚುನಾವಣೆ ಸಂದರ್ಭ ಮತಗಳಿಕೆಗೆ ಮಾತ್ರ ದಲಿತ ಪ್ರೇಮ ಬಿಂಬಿಸುವ ಕಾಂಗ್ರೆಸ್ ಆ ಬಳಿಕ ದಲಿತರಿಗೆ ಯಾವದೇ ರೀತಿಯ ಉನ್ನತ ಸ್ಥಾನಮಾನಗಳನ್ನು ನೀಡಲು ಮುಂದಾಗುವದಿಲ್ಲ ಎಂದು ದೂರಿದರು. ಗೋಷ್ಠಿಯಲ್ಲಿ ಪಕ್ಷದ ಪ್ರಮುಖ ಗಣೇಶ್ ಇದ್ದರು.