ಮಡಿಕೇರಿ, ಫೆ. 22: ಮಡಿಕೇರಿ ನಗರ ವ್ಯಾಪ್ತಿಯ ಹಲವು ಪೊಲೀಸ್ ವಸತಿ ಗೃಹಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಇಂದು ದಿಢೀರ್ ಭೇಟಿ ನೀಡಿ ವಸತಿ ಗೃಹಗಳ ಸ್ಥಿತಿಗತಿಯ ಕುರಿತು ಪರಿಶೀಲನೆ ನಡೆಸಿದರು.ಭೇಟಿಯ ನಡುವೆ ಅವರು ಅಪ್ಪಚ್ಚಕವಿ ರಸ್ತೆಯಲ್ಲಿರುವ ಪೊಲೀಸ್ ಇಲಾಖೆಗೆ ಸೇರಿದ ಜಾಗ ಹಾಗೂ ಪೊಲೀಸ್ ವಸತಿಗೃಹದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಜಿಲ್ಲಾ ಅಪರಾಧ ಘಟಕಕ್ಕೂ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಸಲಹೆಯಿತ್ತರು.
ಈ ಸಂದರ್ಭ ‘ಶಕ್ತಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ರಾಜೇಂದ್ರ ಪ್ರಸಾದ್ ಅವರು ಪರಿಶೀಲನೆಯ ಉದ್ದೇಶದ ಕುರಿತು ಮಾಹಿತಿಯಿತ್ತರು. ಕಾಸ್ಮೋ ಪಾಲಿಟನ್ ಕ್ಲಬ್ನ ಕೆಳಭಾಗದಲ್ಲಿ ಬರುವ ಪೊಲೀಸ್ ಇಲಾಖೆಗೆ ಸೇರಿರುವ ಮೈದಾನ ಜಾಗ ಹಾಗೂ ಕ್ಲಬ್ನ ಜಾಗದ ಕುರಿತಾಗಿ ಇದ್ದ ಗೊಂದಲ ನಿವಾರಣೆಯಾಗಿದೆ.
(ಮೊದಲ ಪುಟದಿಂದ) ಈ ಜಾಗದ ಸರ್ವೆ ಕಾರ್ಯ ನಡೆಸಿ ಕ್ಲಬ್ನವರು ಅವರಿಗೆ ಸೇರಿದ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಇಲಾಖೆಗೆ ಸೇರಿರುವ ಈ ಜಾಗದ ಸುತ್ತಮುತ್ತಲ ಹಲವಾರು ಪೊಲೀಸ್ ವಸತಿ ಗೃಹಗಳಿದ್ದು, ಈ ಮೈದಾನವನ್ನು ಉತ್ತಮ ಆಟದ ಮೈದಾನವಾಗಿ ಪರಿವರ್ತಿಸಲಾಗುವದು. ಬಾಸ್ಕೆಟ್ಬಾಲ್, ವಾಲಿಬಾಲ್ ಆಟದ ಅಂಕಣವನ್ನು ಸಿದ್ದಪಡಿಸಲಾಗುವದು. ಕ್ರೀಡೆಗೆ ಉತ್ತೇಜನ ನೀಡಿದಲ್ಲಿ ಪೊಲೀಸರಿಗೆ ಅವರ ಕರ್ತವ್ಯ ನಿರ್ವಹಣೆಗೆ ಇನ್ನಷ್ಟು ಉತ್ಸಾಹವಿರುತ್ತದೆ. ಜತೆಗೆ ಅವರ ಮಕ್ಕಳು ಮನೆಯಲ್ಲಿ ಕುಳಿತು ಸಾಮಾಜಿಕ ಜಾಲ ತಾಣದಲ್ಲೇ ಕಾಲ ಕಳೆಯುವದನ್ನು ತಪ್ಪಿಸಿ ಮೈದಾನಕ್ಕೆ ಇಳಿಯುವಂತೆ ಮಾಡಬಹುದು ಎಂಬ ಚಿಂತನೆ ಹೊಂದಿರುವದಾಗಿ ತಿಳಿಸಿದರು.
ಪೊಲೀಸರ ವಸತಿಗೃಹದಲ್ಲೂ ಹಲವಾರು ಸಮಸ್ಯೆಗಳಿದ್ದು, ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವದು. ಇಲಾಖಾ ಸಿಬ್ಬಂದಿಗೆ ಸೌಲಭ್ಯ ಕಲ್ಪಿಸಲು ಇಲಾಖೆ ಈ ಹಿಂದಿಗಿಂತ ಸುಲಲಿತವಾಗಿ ಅನುದಾನ ಲಭ್ಯವಾಗುತ್ತಿದೆ. ಕಳೆದ ವರ್ಷ ರೂ. 1.20 ಕೋಟಿ ಅನುದಾನ ಬಂದಿದ್ದು, ಹಲವು ವಸತಿಗೃಹಕ್ಕೆ ಕಾಯಕಲ್ಪ ನೀಡಲಾಗಿದೆ. ಈ ಬಾರಿ ರೂ. 70ಲಕ್ಷ ಅನುದಾನ ದೊರೆತಿದ್ದು, ಮಾದಾಪುರ ಉಪಠಾಣೆ ಸೇರಿದಂತೆ 5 ವಸತಿಗೃಹ ಸಿದ್ದಾಪುರದ 15 ವಸತಿಗೃಹ, ಪೊನ್ನಂಪೇಟೆ ಹಳೇ ಠಾಣೆ ಹಾಗೂ ಎಸ್ಐ ವಸತಿಗೃಹ ದುರಸ್ತಿ, ಶ್ರೀಮಂಗಲ ಎಸ್ಐ ವಸತಿಗೃಹ ದುರಸ್ತಿಗೆ ಯೋಜನೆ ಹಮ್ಮಿಕೊಳ್ಳಲಾಗಿದ್ದು, ನಿರ್ಮಿತಿ ಕೇಂದ್ರದವರು ಕಾಮಗಾರಿ ನಿರ್ವಹಿಸಲಿದ್ದಾರೆಂದು ವಿವರವಿತ್ತರು.
ನಗರ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ, ನಗರ ಅಪರಾಧ ವಿಭಾಗದ ಠಾಣಾಧಿಕಾರಿ ವೆಂಕಟರಮಣ, ಎಸ್ಪಿ ಅವರೊಂದಿಗಿದ್ದರು.