ಗೋಣಿಕೊಪ್ಪಲು, ಫೆ. 22: ಪುಷ್ಪಗಿರಿ ಸ್ವಚ್ಛತಾ ಆಂದೋಲನಾ ಮತ್ತು ಜಿಲ್ಲೆಯಾದ್ಯಂತ ಪ್ರವಾಸಿಗರಲ್ಲಿ ಶುಚಿತ್ವದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಿರಂತರ ಹಮ್ಮಿಕೊಳ್ಳುತ್ತಿರುವ ಕೊಡಗು ಜಾವಾ ರೈಡರ್ಸ್ ಯುವಕರು ಇದೀಗ ಬೆಂಗಳೂರಿನ ಮಲ್ನಾಡ್ ಡೈರೀಸ್ ಸಂಸ್ಥೆಯೊಂದಿಗೆ ಕೈಜೋಡಿಸಿ ಬಿರುನಾಣಿ ಸಮೀಪ ಮರೆನಾಡು ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿ ಹಾಗೂ ಸ್ವಚ್ಛ ಕುಡಿಯುವ ನೀರಿನ ಘಟಕವನ್ನು ಒದಗಿಸಿದರು.

ಮಲ್ನಾಡ್ ಶಾಲಾ ವಿದ್ಯಾರ್ಥಿಗಳಿಗೆ ‘ಇಕೋ ಶ್ಯೂರ್’ನ ಎರಡು ಶುದ್ಧ ನೀರಿನ ಘಟಕವನ್ನು ಹಾಗೂ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ವಾಲಿಬಾಲ್, ಫುಟ್‍ಬಾಲ್, ಶಟಲ್ ಬ್ಯಾಡ್‍ಮಿಂಟನ್ ನೆಟ್ ಮತ್ತು ಚೆಂಡನ್ನು ಕೊಡುಗೆಯಾಗಿ ನೀಡಲಾಯಿತು ಎಂದು ಕೆಜೆವೈಎಂಸಿ ಕಾರ್ಯದರ್ಶಿ ಅಜ್ಜಿಕುಟ್ಟಿರ ತಿಮ್ಮಯ್ಯ ತಿಳಿಸಿದ್ದಾರೆ.

ಸಮಾಜ ಸೇವಕಿ ಕಳಕಂಡ ಮುತ್ತಕ್ಕಿ ಭೀಮಯ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮುಂಬೈನಿಂದ ಬಿರುನಾಣಿಗೆ ಯಝ್ಧಿ ಬೈಕ್‍ನಲ್ಲಿ ಆಗಮನ

ಇದೇ ಸಂದರ್ಭ ಮುಂಬೈನಿಂದ ಬಿರುನಾಣಿವರೆಗೂ ಸುಮಾರು 2200 ಕಿ.ಮೀ. ಬೈಕ್‍ನಲ್ಲಿ ಆಗಮಿಸಿದ್ದ 62ರ ಪ್ರಾಯದ ಶ್ರೀರಾಮ್ ಕದಮ್ ಹಾಗೂ ಅಮಿತ್ ಅವರ ಸಾಹಸವನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಲ್ಲಾರಂಡ ಬೋಪಣ್ಣ, ಬೆಂಗಳೂರಿನ ರೋಷನ್ ಕಾಮತ್, ಮಂಗಳೂರಿನ ಶಾನ್ ಫರ್ನಾಂಡೀಸ್, ಅನಿಲ್ ಮತ್ತು ಮೈಸೂರಿನ ಪಿ.ಸಿ. ಯಝ್ಧಿ, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.