ಕುಶಾಲನಗರ, ಫೆ. 22: ಕೊಡಗು ಜಿಲ್ಲೆಯ ಪ್ರತಿಭೆಗಳನ್ನು ಒಳಗೊಂಡ ನಟನಟಿಯರ ಕನ್ನಡ ಚಲನಚಿತ್ರವೊಂದು ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣದಲ್ಲಿ ತೊಡಗಿದೆ. ಕುಶಾಲನಗರದ ಕಲಾವಿದ ಟಿ.ಆರ್. ಪ್ರಭುದೇವ್ ಸಾರಥ್ಯದಲ್ಲಿ ಸ್ಥಳೀಯ ಕಲಾವಿದರನ್ನು ಒಳಗೊಂಡಿರುವ ‘ಅಪ್ಪ’ ಚಲನಚಿತ್ರ ಚಿತ್ರೀಕರಣ ಗೊಳ್ಳುತ್ತಿದ್ದು ಈಗಾಗಲೆ ಶೇ. 50 ರಷ್ಟು ಚಿತ್ರ ಪೂರ್ಣಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಮರಳು ಗಣಿಗಾರಿಕೆ ಸೇರಿದಂತೆ ಇತರೆ ಅಂಶಗಳನ್ನು ಹೊಂದಿರುವ ಈ ಚಿತ್ರದಲ್ಲಿ ಬೆಂಗಳೂರಿನ ಖ್ಯಾತ ಛಾಯಾಗ್ರಾಹರು, ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ಪ ಚಿತ್ರ ಬಾಂಧವ್ಯಗಳ ಬೆಸುಗೆ ಎಂಬ ಅಡಿಬರಹದೊಂದಿಗೆ ತಯಾರಾಗು ತ್ತಿರುವ ಚಲನಚಿತ್ರ ಅಪ್ಪ-ಮಗನ ಬಾಂಧವ್ಯ ಹಾಗೂ ಸಾಮಾಜಿಕ ಚಿಂತನೆಯ ಬಗ್ಗೆ ಸಂದೇಶ ಸಾರುವ ಚಿತ್ರವಾಗಲಿದೆ. ಎಸ್‍ಜಿಎಂ ಪ್ರೊಡಕ್ಷನ್ಸ್ ಬ್ಯಾನರ್‍ನಡಿಯಲ್ಲಿ ತಯಾರಾಗು ತ್ತಿರುವ ಚಿತ್ರಕ್ಕೆ ಟಿ.ಆರ್. ಪ್ರಭುದೇವ್ ಕಥೆ ಹಾಗೂ ಸಂಭಾಷಣೆ ರಚಿಸಿ ಚಿತ್ರದಲ್ಲಿ ಅಪ್ಪನ ಪಾತ್ರ ನಿರ್ವಹಿಸುತ್ತಿದ್ದಾರೆ, ಹಲವಾರು ಚಿತ್ರಗಳಲ್ಲಿ ನಟಿಸಿರುವ ಕುಶಾಲನಗರದ ಗಯಾಜ್ ಅವರು ನಿರ್ದೇಶಿಸುತ್ತಿದ್ದಾರೆ. ಕುಶಾಲನಗರ ಸಚಿನ್ ನಾಯಕನಟರಾಗಿ ಕಾರ್ಯನಿರ್ವಹಿಸುತ್ತಿದ್ದು ಉಳಿದಂತೆ ಬೆಂಗಳೂರು ಮೂಲದ ಕೆಲವು ಕಲಾವಿದರು ಚಿತ್ರದಲ್ಲಿ ಪಾತ್ರ ವಹಿಸುತ್ತಿದ್ದಾರೆ.