ಕೂಡಿಗೆ, ಫೆ. 22: ಮಠ ಮಾನ್ಯಗಳು ಧಾರ್ಮಿಕ ,ಶೈಕ್ಷಣಿಕ, ಸಾಮಾಜಿಕವಾಗಿ ಸೇವೆ ಸಲ್ಲಿಸುವದರೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಸಮೀಪದ ತೊರೆನೂರು ವಿರಕ್ತ ಮಠದಲ್ಲಿ ಚರಮೂರ್ತಿ ಮಹಾಂತಸ್ವಾಮೀಜಿ ಅವರ 5ನೇ ಪುಣ್ಯ ಸಂಸ್ಮರಣೋತ್ಸವ ಹಾಗೂ ನೂತನ ಗದ್ದಿಗೆ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಮಠಗಳು ಜನರಲ್ಲಿ ಉತ್ತಮ ಸಂಸ್ಕಾರ, ಧಾರ್ಮಿಕ ಚಿಂತನೆ ಬೆಳೆಸುವ ಮೂಲಕ ಅರಿವಿನ ಜ್ಯೋತಿಯನ್ನು ಬೆಳಗಿಸುತ್ತಿವೆ ಎಂದರು.
ಡಿಂಡುಗಾಡು ವಿರಕ್ತಮಠದ ಅಪ್ಪಾಜಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳುವ ಮೂಲಕ ತಮ್ಮನ್ನು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕ ಗೊಳಿಸಿಕೊಳ್ಳಬೇಕು ಹೇಳಿದರು.
ಮನೆಹಳ್ಳಿ ತಪೋವನದ ಮಹಾಂತ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ತೊರೆನೂರು ಮಠದ ಚರಮೂರ್ತಿ ಸ್ವಾಮೀಜಿ ಸಹೃದಯಿಯಾಗಿದ್ದು, ಜನಪರ ಚಿಂತನೆ ಹೊಂದಿದ್ದರು ಎಂದರು. ತೊರೆನೂರು ವಿರಕ್ತಮಠದ ಶ್ರೀಮಲ್ಲೇಶ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಎಚ್.ಡಿ.ಕೋಟೆ ಸಂತೆಸರಗೂರಿನ ಮಹಾದೇವ ಸ್ವಾಮೀಜಿ, ಚಿನ್ಮಯಿ ಮಠದ ಜಯದೇವ ಸ್ವಾಮೀಜಿ, ಕುಶಾಲನಗರ ಎಪಿಸಿಎಂಎಸ್‍ಸಿ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ ಇದ್ದರು. ಇದೇ ಸಂದರ್ಭ ನೆರೆದಿದ್ದ ಸಭಿಕರಿಗೆ ಮಠದ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.