ಸೋಮವಾರಪೇಟೆ, ಫೆ. 22: ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವದರೊಂದಿಗೆ ಪರಿಸರ ಉಳಿವಿನತ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಪಟ್ಟಣ ಪಂಚಾಯಿತಿ ವತಿಯಿಂದ ಇಲ್ಲಿನ ಜೇಸಿ ವೇದಿಕೆಯಲ್ಲಿ ಸ್ವಚ್ಛ ಭಾರತ್ ಆಂದೋಲನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಶನಿವಾರಸಂತೆ ವಿಘ್ನೇಶ್ವರ ಶಾಲೆಯ ಶಿಕ್ಷಕ ಜಯಕುಮಾರ್ ಮಾತನಾಡಿ, ಸ್ವಚ್ಛ ಭಾರತದ ಕನಸು ಮಹಾತ್ಮ ಗಾಂಧಿಯವರದ್ದು, ಅದನ್ನು ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ವಿಜಯಲಕ್ಷ್ಮೀ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ಸದಸ್ಯರಾದ ಬಿ.ಎಂ. ಸುರೇಶ್, ಶೀಲಾ ಡಿಸೋಜ, ಸುಷ್ಮಾ, ಮೀನಾಕುಮಾರಿ, ಮಹಿಳಾ ಸಮಾಜ ಅಧ್ಯಕ್ಷೆ ನಳಿನಿ ಗಣೇಶ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಜಲಜಾ ಶೇಖರ್, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಉದಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.