ಶನಿವಾರಸಂತೆ, ಫೆ. 22: ಶಾಲೆಯ ಬಿಸಿಯೂಟದಲ್ಲಿ ಕೂದಲು, ಕಸ, ಕಲ್ಲು, ಹುಳು ಎಲ್ಲವೂ ಇದೆ. ಕೊಳೆತ ತರಕಾರಿಯ ಸಾರು ನೀರಾಗಿರುತ್ತದೆ. ಐದಾರು ತೆಂಗಿನ ಮರಗಳಿದ್ದರೂ ಬಳಸುವದಿಲ್ಲ. ಹಾಲು ಸರಿಯಾಗಿ ಕುದಿಸುವದಿಲ್ಲ. ಊಟ ಮಾಡಲಾಗುತ್ತಿಲ್ಲ. ಮುಖ್ಯ ಶಿಕ್ಷಕಿ ಸರಿಯಾಗಿ ಪಾಠ ಮಾಡುವದಿಲ್ಲ. ಹೆಣ್ಣು ಮಕ್ಕಳ ಶೌಚಾಲಯದ ಶೀಟನ್ನು ಕದ್ದೊಯ್ದಿದ್ದಾರೆ.

ಈ ದೂರುಗಳನ್ನು ಕರ್ನಾಟಕ ರಕ್ಷಣಾ ವೇದಿಕೆಗೆ (ಶಿವರಾಮೇಗೌಡ ಬಣ) ಬರೆದವರು ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 10 ಮಕ್ಕಳು. ಶಾಲಾ ಮಕ್ಕಳು ಬರೆದ ದೂರು ಪತ್ರಕ್ಕೆ ಸ್ಪಂದಿಸಿದ ಕ.ರ.ವೇ. ಶಿಕ್ಷಣ ಹಾಗೂ ಅಕ್ಷರ ದಾಸೋಹ ಇಲಾಖೆ ಗಮನಕ್ಕೆ ತಂದು ಶೀಘ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿತ್ತು.

ಪರಿಣಾಮವಾಗಿ ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್, ಕಾರ್ಯದರ್ಶಿ ಭುವನೇಶ್ವರ್, ಪದಾಧಿಕಾರಿಗಳು, ತಾಲೂಕು ಶಿಕ್ಷಣ ಸಂಯೋಜಕ ರಾಮಚಂದ್ರಮೂರ್ತಿ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಹೇಮಂತ್ ಹಾಗೂ ಸಂಪನ್ಮೂಲ ವ್ಯಕ್ತಿ ನಿರ್ಮಲಾ ಶಾಲೆಗೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿದರು.

ಶಾಲೆಯಲ್ಲಿ 84 ವಿದ್ಯಾರ್ಥಿಗಳಿದ್ದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಖಾತೆಗೆ ಸರ್ಕಾರದಿಂದ ಬಿಸಿಯೂಟದ ಸಾಮಗ್ರಿ ಬರುತ್ತದೆ. ಸಮಿತಿ ರಚಿಸಿ 3 ತಿಂಗಳಾದರೂ ಒಂದೂ ಸಭೆ ಕರೆದಿಲ್ಲ. ಶಾಲೆಗೆ 7 ಕಂಪ್ಯೂಟರ್ ಒದಗಿಸಿ 7 ವರ್ಷಗಳಾಗಿದ್ದರೂ ಒಂದೇ ಒಂದು ದಿನವೂ ಮಕ್ಕಳಿಗೆ ಕಲಿಸಿಲ್ಲ. ಎಲ್ಲವೂ ಕೆಟ್ಟು ಹೋಗಿದೆ. ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ, ಬಿಸಿಯೂಟ, ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಮಕ್ಕಳ ಟಿ.ಸಿ. ಕೊಡಿಸಿ ಎಂದು ಪೋಷಕರೂ ಆಗ್ರಹಿಸಿ ದೂರಿದರು.

ಮುಖ್ಯ ಶಿಕ್ಷಕಿ ಪದ್ಮಾವತಿ, ಸಹ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅಧಿಕಾರಿಗಳು, ಶೀಘ್ರ ಸಭೆ ಕರೆದು ಇನ್ನು ಒಂದು ತಿಂಗಳೊಳಗೆ ಎಲ್ಲಾ ವ್ಯವಸ್ಥೆ ಸರಿಪಡಿಸಬೇಕು. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿ, ಕ.ರ.ವೇ.ಗೆ ಕೃತಜ್ಞತೆ ಸಲ್ಲಿಸಿದರು.

ಒಂದು ತಿಂಗಳೊಳಗೆ ಎಲ್ಲಾ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಮಕ್ಕಳೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸುವದಾಗಿ ಪ್ರಮುಖರು ಎಚ್ಚರಿಸಿದರು. ಈ ಸಂದರ್ಭ ಕರವೇ ಹೋಬಳಿ ಅಧ್ಯಕ್ಷ ಆನಂದ್, ವಲಯ ಅಧ್ಯಕ್ಷ ಧನು ಪ್ರಕಾಶ್, ಸ್ವಾಮಿ ನಾಯಕ್, ಪ್ರವೀಣ್, ಆನಂದ್, ಎಸ್‍ಡಿಎಂಸಿ ಸದಸ್ಯರು ಹಾಜರಿದ್ದರು.

- ನರೇಶ್