ಸೋಮವಾರಪೇಟೆ, ಫೆ.22: ಸಮೀಪದ ಗಾಂಧಿನಗರದ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದ ವಿಶೇಷ ಪೂಜೆ, ವಿಮಾನಗೋಪುರ ವರ್ಣಾಲಂಕಾರ, ಕುಂಭಾಭಿಷೇಕ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಎರಡು ದಿನಗಳ ಕಾಲ ದೇವಿಗೆ ವಿಶೇಷ ಪೂಜೆ, ಗಂಗಾಪೂಜೆ, ವಿಘ್ನದೂರಾ ದೇವತಾ ಆವಾಹನೆ, ಆರಾಧನೆ, ಪುಣ್ಯಾಹ ವಾಚನ, ಆದಿತ್ಯಾದಿ ನವಗ್ರಹ ಆರಾಧನೆ, ಪಂಚಾಮೃತ ಅಭಿಷೇಕ ಪೂಜೆಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ದೇವಾಲಯದಲ್ಲಿ ಮಂಗಳದ್ರವ್ಯ, ವಿಮಾನಗೋಪುರ ಶುದ್ಧೀಕರಣ, 108 ಕಲಶ ಆವಾಹನೆ, ಪರಿವಾರ ದೇವತಾಹ್ವಾನ, ಋತ್ವಿಗರಣ, ಯಾಗ ಶಾಲಾಪ್ರವೇಶ, ಅಗ್ನಿ ಪ್ರತಿಷ್ಠಾಪನೆ, ಗಣಹೋಮ, ನವಗ್ರಹ ಹೋಮ, ಅಷ್ಟದಿಕ್ಪಾಲಕ ಹೋಮ, ಪಂಚಬ್ರಹ್ಮ ಹೋಮ, ಲಘು ಪೂರ್ಣಾಹುತಿ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಕುಂಭಾಭಿಷೇಕದ ಅಂಗವಾಗಿ ಆನೆಕೆರೆಯಿಂದ ದೇವಾಲಯದವರೆಗೆ ನಡೆದ ಕಳಸ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಹಾಗೂ ಮಕ್ಕಳು ಅತ್ಯಂತ ಶ್ರದ್ಧೆಯಿಂದ ಭಾಗವಹಿಸಿದ್ದರು. ನಂತರ ದೇವಾಲಯದಲ್ಲಿ ಕುಂಭಾಭಿಷೇಕ ಪೂಜೆ ನಡೆಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ವೇದಬ್ರಹ್ಮ ಮಧುಗಿರಿಯ ಎಂ.ಆರ್. ನಾಗಲಿಂಗಾಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಎರಡುದಿನಗಳ ಕಾಲ ನಡೆದವು. ಕುಂಭಾಭಿಷೇಕ ದಿನದಿಂದ ದೇವಾಲಯದಲ್ಲಿ 48 ದಿನಗಳ ಕಾಲ ಪ್ರತಿನಿತ್ಯ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಪೂಜೆ ಮಾಡಿಸಲು ಇಚ್ಛಿಸುವವರು ಆಡಳಿತ ಮಂಡಳಿಯವರನ್ನು ಸಂಪರ್ಕಿಸ ಬಹುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ದುರ್ಗೇಶ್ ಚಿಕ್ಕಣ್ಣ ಮನವಿ ಮಾಡಿದ್ದಾರೆ.
ದೇವಾಲಯ ಸಮಿತಿಯ ಗೌರವಾಧ್ಯಕ್ಷರಾದ ಎಚ್. ಮಂಜುನಾಥ್, ಸಲಹೆಗಾರರಾದ ಎಸ್.ಎಸ್. ಸುಬ್ರಮಣಿ, ಎಚ್.ಪಿ. ಕಾಳಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಕೆ. ಹರೀಶ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಗಾಂಧಿನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.