ಮಡಿಕೇರಿ, ಫೆ. 22: 2015-16ನೇ ಸಾಲಿನಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ ಒಂದು ಬಾರಿಗೆ ರೂ. 50 ಸಾವಿರ ಆರ್ಥಿಕ ನೆರವು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಷರತ್ತುಗಳು: ಅರ್ಜಿದಾರ ದಂಪತಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 10 ಜೋಡಿಗಳು ಭಾಗವಹಿಸಿರತಕ್ಕದ್ದು. ಈ ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಟ 18 ವರ್ಷದಿಂದ ಗರಿಷ್ಠ 42 ವರ್ಷಗಳು, ವರನಿಗೆ ಕನಿಷ್ಟ 21 ವರ್ಷದಿಂದ ಗರಿಷ್ಟ 45 ವರ್ಷ ವಯಸ್ಸು ಆಗಿರತಕ್ಕದ್ದು. ಈ ಯೋಜನೆಯಡಿ ಧನ ಸಹಾಯ ಪಡೆಯಲು ವಧು ಮತ್ತು ವರನ ಒಟ್ಟಾರೆ ವಾರ್ಷಿಕ ಆದಾಯ ರೂ. 2 ಲಕ್ಷಗಳನ್ನು ಮೀರತಕ್ಕದ್ದಲ್ಲ. ಈ ಸೌಲಭ್ಯವನ್ನು ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ಜಿಲ್ಲಾ ನೋಂದಣಿ ಕಚೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್‍ಗಳು, ದೇವಸ್ಥಾನದ ಟ್ರಸ್ಟ್‍ಗಳು, ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಸದರಿ ಸಂಸ್ಥೆಗಳು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. ಪ್ರೋತ್ಸಾಹ ಧನ ಪಡೆಯಲು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ 3 ತಿಂಗಳೊಳಗಾಗಿ ಯೋಜನಾ ಸಮನ್ವಯಾಧಿಕಾರಿಗಳು, ಐ.ಟಿ.ಡಿ.ಪಿ., ಮಡಿಕೇರಿರವರ ಕಚೇರಿಗೆ ಜಂಟಿಯಾಗಿ ನಿಗದಿತ ನಮೂನೆಯಲ್ಲಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ವಧು-ವರನು ವಿವಾಹವಾದ ಬಳಿಕ ವಾಸ್ತವ್ಯವಿರುವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಸಾಮೂಹಿಕ ವಿವಾಹ ಕಾರ್ಯಕ್ರಮದ ಫೋಟೋ ಹಾಗೂ ವಧು-ವರನ ಜಂಟಿ ಭಾವಚಿತ್ರಗಳನ್ನು (ಸ್ಥಿರ ಚಿತ್ರಗಳನ್ನು) ಆಯೋಜಕರಿಂದ ಪಡೆದು ಅರ್ಜಿಯೊಂದಿಗೆ ಲಗತ್ತಿಸುವದು. ಅರ್ಜಿಗಳನ್ನು ಪರಿಶೀಲಿಸುತ್ತಿರುವ, ಪರಿಶೀಲಿಸಿದ ಅಧಿಕಾರಿಗಳ, ಪ್ರಾಧಿಕಾರಿಗಳ ಮೇಲೆ ಯಾವದೇ ರೀತಿಯ ಒತ್ತಡವನ್ನು ತಂದಲ್ಲಿ ಅರ್ಜಿಗಳನ್ನು ಯಾವದೇ ಕಾರಣ ನೀಡದೆ ತಿರಸ್ಕರಿಸಲಾಗುವದು. ಅಂತರ ಜಾತಿ ವಿವಾಹಗಳು ಇದ್ದಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಸ್ಪøಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರಜಾತಿ ವಿವಾಹ ಪ್ರೋತ್ಸಾಹ ಧನಕ್ಕೋಸ್ಕರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ. ಅಂತರ ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಮಂಜೂರಾದ ಪ್ರೋತ್ಸಾಹ ಧನದ ಹಣವನ್ನು ವಧು ಹಾಗೂ ವರನಿಗೆ ಜಂಟಿಯಾಗಿ ಮಂಜೂರು ಮಾಡಲಾಗುವದು ಹಾಗೂ ಮಂಜೂರಾದ ಮೊತ್ತವನ್ನು ವಧು ಮತ್ತು ವರನ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವದು.

ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿಗಳು, ಐ.ಟಿ.ಡಿ.ಪಿ., ಮಡಿಕೇರಿ ದೂರವಾಣಿ ಸಂ: 08272-229983. ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ., ದೂರವಾಣಿ ಸಂ: 08272-223552, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ದೂರವಾಣಿ ಸಂ: 08276-281115. ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ, ವೀರಾಜಪೇಟೆ ದೂರವಾಣಿ ಸಂ: 08274-261261 ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.