ಸೋಮವಾರಪೇಟೆ, ಫೆ. 22: ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನದ ಆಶ್ರಯದಲ್ಲಿ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಶಾಲೆಗಳ ವಿದ್ಯಾರ್ಥಿಗಳಿಗೆ ಓದು ಬರಹ ಅಭಿವ್ಯಕ್ತಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಪ್ರೋತ್ಸಾಹಕ್ಕೆ ಇಂತಹ ವೇದಿಕೆಗಳು ಸಹಕಾರಿಯಾಗಿದ್ದು, ಚಿಕ್ಕವಯಸ್ಸಿನಲ್ಲಿಯೇ ಬಹುಮುಖ ಪ್ರತಿಭೆಗಳಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನಕ್ಕೆ ಸ್ಪರ್ಧಾ ಕಾರ್ಯಗಳು ಅಗತ್ಯವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ರಾಮಚಂದ್ರಮೂರ್ತಿ, ಮುಖ್ಯೋಪಾಧ್ಯಾಯರುಗಳಾದ ಗಂಗೆ, ಪ್ರೇಮಾ, ಅಣ್ಣಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಾದ ದಿನೇಶ್, ಶೇಖರ್ ಅವರುಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಸೋಮವಾರಪೇಟೆ ಜಿಎಂಪಿ, ಬೇಳೂರು ರಸ್ತೆ ಶಾಲೆ, ಚೌಡ್ಲು, ಹಾನಗಲ್ಲು ಶೆಟ್ಟಳ್ಳಿ, ಯಡೂರು, ಕಲ್ಕಂದೂರು, ಕಿಬ್ಬೆಟ್ಟ, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಒಂದರಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಅಭಿನಯ ಗೀತೆ, ಪದಗಳನ್ನು ಬರೆಯುವದು, ನಾಲ್ಕರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂದ ಸೇರಿದಂತೆ ಇನ್ನಿತರ ಪಠ್ಯಾಧಾರಿತ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.