ಸುಂಟಿಕೊಪ್ಪ, ಫೆ.22: ಒಂಟಿ ಸಲಗವೊಂದು ಮಧ್ಯರಾತ್ರಿ ವೇಳೆ ಕಾಫಿ ತೋಟದ ಗೇಟನ್ನು ಮುರಿದು ಒಳನುಗ್ಗಿ ಕಾಫಿ ಗಿಡ ಹಾಗೂ ಇತರೆ ಕೃಷಿ ಫಸಲನ್ನು ನಾಶಪಡಿಸಿದ ಕುರಿತು ವರದಿಯಾಗಿದೆ.
ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪುತೋಡಿನ ಕಾಫಿ ಬೆಳೆಗಾರ ಕೆ.ಎಸ್. ನಂದಕುಮಾರ್ ಅವರ ಕಾಫಿ ತೋಟದ ಗೇಟನ್ನು ಮುರಿದು ಒಳನುಗ್ಗಿದ ಕಾಡಾನೆ ಕಾಫಿ ಗಿಡಗಳನ್ನು, ತೋಟದಲ್ಲಿದ್ದ ಸಪೋಟ, ತೆಂಗು, ಮಾವು, ಕಿತ್ತಳೆ ಗಿಡಗಳನ್ನು ನಾಶಪಡಿಸಿದೆ. ಗೇಟನ್ನು ಮುರಿಯುವ ಸಂದರ್ಭ ಕಾಡಾನೆ ಕಾಲಿಗೆ ಬಲವಾದ ಗಾಯಗಳಾಗಿರುವ ಶಂಕೆಯಿದ್ದು, ಅಲ್ಲಿ ರಕ್ತ, ಕಾಲಿನ ಮಾಂಸದ ಚೂರುಗಳು ಬಿದ್ದಿರುವದು ಕಂಡು ಬಂದಿದೆ.
ತೋಟದ ಮಾಲೀಕ ನಂದಕುಮಾರ್ ನೀಡಿದ ದೂರಿನ ಮೇರೆಗೆ ಕುಶಾಲನಗರ ಅರಣ್ಯ ವಲಯಾಧಿಕಾರಿ ನೆಹರು, ಉಪವಲಯಾಧಿಕಾರಿ ರಂಜನ್ ಹಾಗೂ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ಕಾಡಾನೆ ಆಗ್ಗಿಂದಾಗ್ಗೆ ಲಗ್ಗೆಯಿಡುತ್ತಿದ್ದು, ತೋಟದ ಮಾಲೀಕರುಗಳು ಹಾಗೂ ಕಾರ್ಮಿಕರು ಆತಂಕ ಪಡುವಂತಾಗಿದೆ. ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ನಿಯಂತ್ರಿಸುವಂತೆ ಮನವಿ ಮಾಡಿಕೊಂಡರು.