ಗೋಣಿಕೊಪ್ಪಲು, ಫೆ. 22: ಇಲ್ಲಿನ ಕಾಪ್ಸ್ ಶಾಲೆಯಲ್ಲಿ ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ಪದವಿ ಪ್ರದಾನ ಸಮಾರಂಭ ನಡೆಯಿತು. ಶಾಲಾ ಸಂಪ್ರದಾಯದಂತೆ ಧ್ವಜ ಮತ್ತು ಅಧಿಕಾರ ದಂಡವನ್ನು ವಿದ್ಯಾರ್ಥಿ ನಾಯಕರಿಂದ ಗೌರವಪೂರ್ಣವಾಗಿ ಪ್ರಾಂಶುಪಾಲರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಾಂಶುಪಾಲೆ ಎನ್.ಎ. ಬೊಳ್ಳಮ್ಮ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮಕ್ಕೆ ಮಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೃಷ್ಠಿಕಲಾ ವಿನ್ಯಾಸ ಮತ್ತು ತಾಂತ್ರಿಕ ವಿದ್ಯಾಲಯದ ಸ್ಥಾಪಕ ನಿರ್ದೇಶಕಿ ಡಾ. ಗೀತಾ ನಾರಾಯಣನ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಈ ಶತಮಾನದ ಕೊಡುಗೆಯಿದ್ದಂತೆ. ಸತ್ಯ, ನಿಷ್ಠೆ, ಪ್ರಾಮಾಣಿಕತೆಯನ್ನು ಎತ್ತಿಹಿಡಿಯಬೇಕಾಗಿರುವದು ಈ ಪ್ರವರ್ಧಮಾನದ ಧರ್ಮವಾಗಬೇಕು ಎಂದರು. ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎನ್. ಬೆಳ್ಯಪ್ಪ ಮಾತನಾಡಿ, ಕಠಿಣ ಶ್ರಮ, ದೃಢ ನಿರ್ಧಾರ, ಸಮರ್ಪಣಾ ಭಾವ - ಇವುಗಳು ಗುರಿ ತಲಪಿಸುವ ಮೆಟ್ಟಿಲುಗಳು ಎಂದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಮೊಂಬತ್ತಿಯ ಬೆಳಕಿನ ಮೂಲಕ ಜ್ಞಾನ ಧೀವಿಗೆಯನ್ನು ಪ್ರಜ್ವಲಿಸಿದರು.