ಮಡಿಕೇರಿ, ಫೆ. 22: ನಗರದ ಕಾನ್ವೆಂಟ್ ಜಂಕ್ಷನ್‍ನಿಂದ ಕಾನ್ವೆಂಟ್‍ಗೆ ತೆರಳಲು ಕಾಲುದಾರಿಯೊಂದಿದೆ. ಚರಂಡಿ ನಿರ್ಮಿಸಿ ಸ್ಲ್ಯಾಬ್ ಹಾಕಿ ದಾರಿ ನಿರ್ಮಿಸಿದ್ದರೂ, ಮಳೆಯ ರಭಸಕ್ಕೆ ಅಲ್ಲಲ್ಲಿ ತೂತುಗಳು ಕೊರೆದಿದ್ದು, ಪುಟಾಣಿ ಮಕ್ಕಳು ಹೇಗೋ ಗುಂಡಿಗೆ ಬೀಳದೆ ಅಪಾಯದಿಂದ ಪಾರಾಗಿದ್ದಾರೆ.ಆದರೆ, ಇಂದು ಆ ಹಾದಿಯಲ್ಲಿ ಬರುತ್ತಿದ್ದ ದುರ್ದೈವಿ ಗರ್ಭಧಾರಿ ಹಸುವಿನ ಹಿಂದಿನ ಕಾಲು ಹಳ್ಳದೊಳಕ್ಕೆ ಹೋದ ಪರಿಣಾಮ ತೊಡೆಭಾಗದಿಂದಲೇ ತುಂಡಾಗಿ ನರಳಲಾರಂಭಿಸಿತು. ನೋವಿನಿಂದಲೇ ತೆರಳುತ್ತಾ ಮತ್ತೊಂದು ಹಳ್ಳಕ್ಕೆ ಬಿತ್ತು. ಘಟನೆ ನೋಡುತ್ತಿದ್ದ ಮಹಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ವಿಕಾಸ್ ಜನಸೇವಾ ಟ್ರಸ್ಟ್‍ನ ಪ್ರಮುಖರು ನೆರವಿಗೆ ಮುಂದಾದರು. ಮತದಾರರನ್ನೇ ಮರೆತಿರುವ ಹಾಗೂ ವಾರ್ಡ್ ಅತ್ತ ನುಸುಳದ ಈ ವಿಭಾಗದ ನಗರಸಭಾ ಸದಸ್ಯೆ ಬದಲು ಪಶು ವೈದ್ಯ ಚಿದಾನಂದ್ ಅವರನ್ನು ಸಂಪರ್ಕಿಸಿ ನೆರವು ಯಾಚಿಸಿದರು. ಸ್ಥಳಕ್ಕೆ ಬಂದ ವೈದ್ಯರು, ಹಸುವಿನ ಮತ್ತೊಂದು ಕಾಲು ಈ ಹಿಂದೆಯೇ ಊನವಾಗಿದ್ದು, ಕನಿಷ್ಟ 2 ತಿಂಗಳು ಎದ್ದೇಳಲು ಸಾಧ್ಯವಿಲ್ಲ ಎಂದರು. ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಅವರಿಗೆ ಸೇರಿದ ಖಾಲಿ ಮಳಿಗೆಗೆ ಯುವಕರು ಈ ಗಾಯಾಳು ಹಸುವನ್ನು ಸಾಗಿಸಿ ಆಶ್ರಯ ಒದಗಿಸಿದರು.
ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಸುವಿಗೆ ಶುಶ್ರೂಷೆ ನೀಡಿದ ವೈದ್ಯರ ಬಗ್ಗೆ ಸಾರ್ವಜನಿಕರು ಪ್ರಶಂಸೆ ಪಟ್ಟಿದೆ. ಸಾಕಿದ ಹಸುಗಳನ್ನು ಬಿಡಾಡಿಗಳಾಗಿ ಬಿಡುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.