ಮಡಿಕೇರಿ, ಫೆ.22 : ದೇಶವ್ಯಾಪಿ ಗೋಹತ್ಯೆಯನ್ನು ನಿಷೇಧಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾ. 26 ರಂದು ನಗರದ ಗಾಂಧಿ ಮೈದಾನದಲ್ಲಿ “ಗೋ ಸತ್ಯಾಗ್ರಹ”ವನ್ನು ನಡೆಸಲು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ನಿರ್ಧರಿಸಿವೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ, ದೇಶ ಹಾಗೂ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಲು ಮಿತಿ ಮೀರಿದ ಗೋಹತ್ಯೆಯೇ ಕಾರಣವೆಂದು ಅಭಿಪ್ರಾಯಪಟ್ಟರು.

ರಾಷ್ಟ್ರದಾದ್ಯಂತ ಗೋಹತ್ಯೆ ನಿಷೇಧಿಸಬೇಕು, ಗೋಹಂತಕರಿಗೆ 7 ವರ್ಷ ಜೈಲು ಶಿಕ್ಷೆ ನೀಡಿ 1 ಲಕ್ಷ ರೂ. ದಂಡ ವಿಧಿಸಬೇಕು, ಗೋ ಹಿಂಸೆ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ

(ಮೊದಲ ಪುಟದಿಂದ) ರೂ.50 ಸಾವಿರ ದಂಡ ವಿಧಿಸಬೇಕು ಮತ್ತು ಗೋಸಾಗಾಟದ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ರಾಜ್ಯದಲ್ಲಿ ಗೋಮಾಳ ಭೂಮಿ ಸರ್ವೆ ಮಾಡಿ ಬೇಲಿ ಹಾಕಬೇಕು, ಹಸಿ ಹುಲ್ಲನ್ನು ಬೆಳೆಸಿ ಗೋವುಗಳ ಆಹಾರವಾಗಿ ರಿಯಾಯಿತಿ ದರದಲ್ಲಿ ನೀಡಬೇಕೆಂದು ಒತ್ತಾಯಿಸಿ ತಾ. 26 ರಂದು ಪೂರ್ವಾಹ್ನ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ನಡೆಸುವದಾಗಿ ನರಸಿಂಹ ತಿಳಿಸಿದರು.

ಪಾಕಶಾಸ್ತ್ರದಲ್ಲಿ ಎಲ್ಲೂ ಗೋಮಾಂಸ ಭಕ್ಷಣೆಯನ್ನು ಆಹಾರ ಪದ್ಧತಿ ಎಂದು ಉಲ್ಲೇಖಿಸಿಲ್ಲವೆಂದ ಅವರು, ಗೋ-ಉತ್ಪನ್ನಗಳಷ್ಟೇ ಆಹಾರವೆಂದು ಅಭಿಪ್ರಾಯಪಟ್ಟರು.

ಅನಾದಿ ಕಾಲದಿಂದಲೂ ರಾಷ್ಟ್ರದಲ್ಲಿ ಗೋ ಹತ್ಯೆ ನಿಷೇಧವಿತ್ತು. ಆದರೆ ಇಂದು ಕೆಲವರು ಆಹಾರ ಪದ್ಧತಿಯ ನೆಪದಲ್ಲಿ ಗೋವುಗಳನ್ನು ನಿರಂತರವಾಗಿ ಹತ್ಯೆ ಮಾಡುತ್ತಿರು ವದರಿಂದ ಗೋವಿನ ಸಂತತಿ ನಾಶವಾಗುತ್ತಿದೆ. ಗೋಸಂತತಿ ಅವನತಿಯತ್ತ ಸಾಗುತ್ತಿರುವದರಿಂದ ಕೃಷಿ ಚಟುವಟಿಕೆಗಳೂ ಕುಂಠಿತಗೊಂಡಿದೆ. ದೇಶದಾದ್ಯಂತ ಬಹುಪಾಲು ಜನರು ಗೋಹತ್ಯೆ ನಿಷೇಧವನ್ನು ಬಯಸುತ್ತಿದ್ದಾರೆ. ಆದ್ದರಿಂದ ರಾಷ್ಟ್ರದಾದ್ಯಂತ ತಾ. 26ರಂದು ಸಾಧು ಸಂತರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೋಹತ್ಯೆ ನಿಷೇಧಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಭಜರಂಗದಳದ ಜಿಲ್ಲಾ ಸಂಚಾಲಕ ಎನ್.ಕೆ. ಅಜಿತ್, ಸಹ ಸಂಚಾಲಕ ಚೇತನ್, ಮಡಿಕೇರಿ ತಾಲೂಕು ಸಂಚಾಲಕ ಮನು ರೈ ಹಾಗೂ ಗೋರಕ್ಷಾ ಪ್ರಮುಖ ಬಲ್ಲಾರಂಡ ಕಂಠಿ ಕಾರ್ಯಪ್ಪ ಉಪಸ್ಥಿತರಿದ್ದರು.