ಮಡಿಕೇರಿ, ಫೆ. 22: ಮಡಿಕೇರಿ ತಾಲೂಕು ಪಂಚಾಯಿತಿ ಕೆಲಸ ಕಾರ್ಯಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಅವರು ಸಹಕಾರ ನೀಡುತ್ತಿಲ್ಲವೆಂದು ಆರೋಪಿಸಿ ಇಂದು ಮಡಿಕೇರಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಿಇಓ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ತಾ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶೋಭಾ ಮೋಹನ್ ಅವರು ಮಡಿಕೇರಿ ತಾಲೂಕು ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಇರುವಂತಹ ಸಿಬ್ಬಂದಿಗಳನ್ನು ಕೂಡ ದಿಢೀರ್ ವರ್ಗಾವಣೆ ಮಾಡಲಾಗುತ್ತಿದೆ. ತಾ.ಪಂ.ನ ಯೋಜನಾ ಕಾರ್ಯಗಳಿಗೆ ಅನುಮೋದನೆ ನೀಡಲು ಸಿಇಓ ಅವರು ವಿಳಂಬ ಮಾಡುತ್ತಿರುತ್ತಾರೆ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಮಾತನಾಡಿ, ಜಿ.ಪಂ. ಸಿಇಓ ಅವರು ತಾಲೂಕು ಪಂಚಾಯಿತಿ ಯನ್ನು ಕಡೆಗಣಿಸುತ್ತಿದ್ದಾರೆ. ಅವರ ಅಸಹಕಾರದಿಂದ ಯಾವದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಆದ್ದರಿಂದ ಸಿಇಓ ಅವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಸದಸ್ಯ ಕೊಡಪಾಲು ಗಣಪತಿ ಅವರು ಕೂಡ ಇದಕ್ಕೆ ದನಿಗೂಡಿಸಿದರು. ಕೊನೆಗೆ ಸಿಇಓ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

(ಮೊದಲ ಪುಟದಿಂದ) ಸದಸ್ಯರುಗಳಾದ ಇಂದಿರಾ ಹಾಗೂ ಉಮಾ ಮಾತನಾಡಿ ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲಾ ಶಿಕ್ಷಕರನ್ನು ತರಬೇತಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆ ಉಂಟಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಇದಕ್ಕೆ ದÀನಿಗೂಡಿಸಿ ಶಿಕ್ಷಕರನ್ನು ಪರೀಕ್ಷಾ ಸಮಯದಲ್ಲಿ ತರಬೇತಿಗೆ ನಿಯೋಜಿಸಿ; ಉತ್ತಮ ಫಲಿತಾಂಶ ಬೇಕು ಎಂದು ನಿರೀಕ್ಷಿಸುವದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಶಿಕ್ಷಣ ಇಲಾಖೆ ಶಿಕ್ಷಕರನ್ನು ತರಬೇತಿಗೆ ನಿಯೋಜಿಸುವ ಬಗ್ಗೆ ತಾಲೂಕು ಪಂಚಾಯಿತಿಗೆ ಸುತ್ತೋಲೆ ಕಳುಹಿಸಿದೆಯೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಿಂದ ಸುತ್ತೋಲೆ ಬಂದಿಲ್ಲ ಎಂಬ ಉತ್ತರ ದೊರೆತ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ನಾಗೇಶ್ ಅವರು, ಶಿಕ್ಷಣ ಇಲಾಖೆ ತಾಲೂಕು ಪಂಚಾಯಿತಿಗೆ ಒಳಪಟ್ಟು ಕೆÀಲಸ ಮಾಡುವದಾದರೆ ಮಾಡಲಿ ಇಲ್ಲವಾದರೆ ಬೇಡ ಎಂದು ಹೇಳಿದರು.

ನಾಗೇಶ್ ಕುಂದಲ್ಪಾಡಿ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಹಾಸ್ ಅವರು ‘ಶಿಕ್ಷಣದ ಬಗ್ಗೆ ಮಾನ್ಯ ಸದಸ್ಯರಿಗಿರುವ ಕಾಳಜಿಯನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ನಾಗೇಶ್ ಕುಂದಲ್ಪಾಡಿ ಅವರು ‘ನಿಮ್ಮ ಸೋಗಲಾಡಿತನದ ಮಾತು ನಮಗೆ ಬೇಡ; ಸರಿಯಾಗಿ ಕೆಲಸ ಮಾಡಿ ಅಷ್ಟೆ’ ಎಂದು ಹೇಳಿದರು.

ಐಸ್ ಕ್ರೀಂನಿಂದ ಜಾಂಡೀಸ್!

ನಾಪೋಕ್ಲು ಭಾಗದಲ್ಲಿ ಮಕ್ಕಳಲ್ಲಿ ಜಾಂಡೀಸ್ ಪತ್ತೆಯಾಗಿರುವ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಅವರ ಬಳಿ ಸಭೆ ವಿವರ ಬಯಸಿತು. ಈ ಸಂದರ್ಭ ಪ್ರತಿಕ್ರಿಯಿಸಿದ ರವಿಕುಮಾರ್ ನಾಪೋಕ್ಲುವಿನಲ್ಲಿ ಕಾವೇರಿ ಹೊಳೆಯಿಂದ ಶುಚಿಗೊಳಿಸದ ನೀರನ್ನು ನೇರವಾಗಿ ಬಳಸಿಕೊಂಡು ಐಸ್ ಕ್ರೀಂ ಹಾಗೂ ಐಸ್‍ಕ್ಯಾಂಡಿ ತಯಾರು ಮಾಡಲಾಗುತ್ತಿದ್ದು, ಇದನ್ನು ತಿಂದ ಮಕ್ಕಳಿಗೆ ಜಾಂಡೀಸ್ ಕಾಣಿಸಿಕೊಂಡಿರುವದು ತಿಳಿದುಬಂದಿದೆ. ಸಂಬಂಧಿಸಿದ ಐಸ್‍ಕ್ರೀಂ ಮಾಲೀಕರಿಗೆ ನೋಟೀಸ್ ನೀಡಲಾಗಿದೆ ಎಂದರು.

ಈ ಬಗ್ಗೆ ಜನಜಾಗೃತಿ ಸಭೆ ನಡೆಸಿ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಕಾವೇರಿ ನದಿ ಏಕೆ ಕಲುಷಿತಗೊಳ್ಳುತ್ತಿದೆ ಎಂಬ ಬಗ್ಗೆಯೂ ಪರಿಶೀಲಿಸಿ ಪತ್ತೆ ಹಚ್ಚಬೇಕೆಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಆಗ್ರಹಿಸಿದರು.

ಮನವಿ ಮಾಡುವದು ಬೇಡ

ಸಭೆಯಲ್ಲಿ ವಿಚಾರವೊಂದರ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಅಧ್ಯಕ್ಷೆ ಶೋಭಾ ಮೋಹನ್ ಅವರು, ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಬಾರದಿರುವ ಬಗ್ಗೆ ಪ್ರಶ್ನಿಸುತ್ತಿದ್ದರು. ಇದಕ್ಕೆ ಆಕ್ಷೇಪಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ ಹಾಗೂ ಅಪ್ರು ರವೀಂದ್ರ ಇವರುಗಳು ಸಭೆಯ ಬಗ್ಗೆ ನೋಟೀಸ್ ಕಳುಹಿಸಲಾಗಿದೆ. ದೂರವಾಣಿ ಮೂಲಕವೂ ಮಾಹಿತಿ ನೀಡಲಾಗಿದೆ. ಹೀಗಿದ್ದರೂ ಅಧಿಕಾರಿಗಳು ಸಭೆಗೆ ಬರದೆ ನಿರ್ಲಕ್ಷಿಸುವದು ಸರಿಯಲ್ಲ. ಅಧ್ಯಕ್ಷರೆ, ನೀವು ಅಂತವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿ; ಅದನ್ನು ಬಿಟ್ಟು ದೂರವಾಣಿ ಮೂಲಕ ಮನವಿ ಮಾಡಿ ಕರೆಯುವ ಪ್ರವೃತ್ತಿ ಬೇಡ ಎಂದು ಸಲಹೆಯಿತ್ತರು.

ತಾಲೂಕು ಪಂಚಾಯಿತಿ ಸಭೆಗಳಿಗೆ ಕಂದಾಯ ಅಧಿಕಾರಿಗಳು ಬರುವದೇ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಹಾಗಿದ್ದಲ್ಲಿ ಮುಂದಿನ ತಾ.ಪಂ. ಸಭೆಯನ್ನು ತಾಲೂಕು ಕಂದಾಯ ಕಚೇರಿಯಲ್ಲಿ ನಡೆಸೋಣ. ಈ ಬಗ್ಗೆ ನಿರ್ಣಯ ಮಾಡಿ ಎಂದು ನಾಗೇಶ್ ಕುಂದಲ್ಪಾಡಿ ಹೇಳಿದರು.

ಸದಸ್ಯ ಅಪ್ರು ರವೀಂದ್ರ ಮಾತನಾಡಿ, ಸರ್ಕಾರದಿಂದ ಬಡ ಮಂದಿಗೆ ನೀಡಲಾಗುವ ಮನೆ ಯೋಜನೆಯಲ್ಲಿ ಕಮೀಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ತನಿಖೆಗೆ ಲಿಖಿತ ದೂರು ನೀಡುವಂತೆ ಅಧ್ಯಕ್ಷರು ಹೇಳಿದರು.

ಭತ್ತ ಬೆಳೆ ಸ್ಪರ್ಧೆ

ಮಡಿಕೇರಿ ತಾಲೂಕು ಕೃಷಿ ಇಲಾಖೆ ವತಿಯಿಂದ 2015-16ನೇ ಸಾಲಿನಲ್ಲಿ ನಡೆಸಲಾದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಿಗ್ಗಾಲುವಿನ ಪಡಿಞÁರಂಡ ಕಾಮವ್ವ ಮಂದಪ್ಪ, ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮಕ್ಕಂದೂರಿನ ಹೆಚ್.ವಿ. ಆನಂದ, ದ್ವಿತೀಯ ಸ್ಥಾನ ಪಡೆದ ಅರೆಕಾಡುವಿನ ವಿನಿತ ಅಯ್ಯಪ್ಪ, ತೃತೀಯ ಸ್ಥಾನ ಪಡೆದ ಹಾಕತ್ತೂರಿನ ಉಳುವಾರನ ಪಿ. ಅನಿಲ್ ಕುಮಾರ್ ಇವರುಗಳಿಗೆ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು. ಇತ್ತೀಚೆಗೆ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಕೃಷಿ ಅಧಿಕಾರಿ ಅಜ್ಜಿಕುಟ್ಟಿರ ಗಿರೀಶ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.