ಶ್ರೀಮಂಗಲ, ಫೆ.22: ತಾ. 26 ರಂದು ಪೂರ್ವಾಹ್ನ 9 ಗಂಟೆಯಿಂದ ಅಪರಾಹ್ನ 2 ಯವರೆಗೆ ಸಂಭ್ರಮ ಮಹಿಳಾ ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಸ್ಥೆ ಟಿ.ಶೆಟ್ಟಿಗೇರಿ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿ, ಲೋಟಸ್ ರಿಕ್ರಿಯೇಷನ್ ಅಸೋಸಿಯೇಷನ್ ಟಿ.ಶೆಟ್ಟಿಗೇರಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ವೀರಾಜಪೇಟೆ, ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಕೊಡಗು ಘಟಕದ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಸಂಘಟಕರು ತಿಳಿಸಿದ್ದಾರೆ.

ಶಿಬಿರದಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮೈಸೂರು, ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಡಿಕೇರಿ, ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ವೀರಾಜಪೇಟೆ, ಅಶ್ವಿನಿ ಆಸ್ಪತ್ರೆ ಮಡಿಕೇರಿ ಹಾಗೂ ಮೈಸೂರಿನಿಂದ ವಿಶೇಷ ಪರಿಣತಿ ಹೊಂದಿದ ತಜ್ಞ ವೈದ್ಯರು ಆಗಮಿಸಿ ಸ್ತ್ರೀ ರೋಗ, ಪ್ರಣಾಳೀಯ ಫಲೀಕರಣ, ಚರ್ಮರೋಗ, ಮಕ್ಕಳ ರೋಗ, ವೈದ್ಯ ಶಾಸ್ತ್ರ, ಕಣ್ಣು, ಕಿವಿ, ಮೂಗು, ಗಂಟಲು, ಮೂತ್ರ ರೋಗ, ಹೃದಯ ರೋಗ, ಮೂಳೆ ರೋಗ, ಹಲ್ಲಿನ ಸಮಸ್ಯೆಗೆ ಸಂಬಂಧಿಸಿದಂತೆ ತಪಾಸಣೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ.

ಇದರೊಂದಿಗೆ ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆಯ ವತಿಯಿಂದ ಕಾರ್ಡಿಯಾಲಜಿ, ಯುರೋಲಜಿ, ಡರ್ಮಾಟಾಲಜಿ ಯಂತಹ ಉಚಿತ ಸೂಪರ್ ಸ್ಪೆಷಾಲಿಟಿ ಕನ್ಸಲ್ಟೇಷನ್ ಮತ್ತು ರಕ್ತ ಮೂತ್ರ ಮತ್ತು ಇ.ಸಿ.ಜಿ ಯಂತಹಾ ಲ್ಯಾಬ್ ಟೆಸ್ಟ್‍ಗಳನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವದು. ವೈದ್ಯರ ಸಲಹೆಯ ಮೇರೆಗೆ ಉಚಿತ ಔಷದಿ ನೀಡಲಾಗುವದು. ಆಂಪ್ಲಿಫೋನ್ ವತಿಯಿಂದ ಉಚಿತ ಕಿವುಡುತನ ತಪಾಸಣೆ, ರೋಟರಿ ಕ್ಲಬ್ ಮಡಿಕೇರಿಯ ವತಿಯಿಂದ ಉಚಿತ ಮಧುಮೇಹ ತಪಾಸಣೆ, ಶಿಬಿರದ ವೈದ್ಯರು ಸಲಹೆ ನೀಡಿದ ರೋಗಿಗಳಿಗೆ ಗೋಣಿಕೊಪ್ಪ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಶೇ 50 ರ ರಿಯಾಯಿತಿ ದರದಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಅಪರೂಪವೆಂಬಂತೆ ಗ್ರಾಮದಲ್ಲಿ ಆಯೋಜಿಸಿರುವ ಈ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ನಾಡಿನ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಡೆದು ಕೊಳ್ಳಬೇಕೆಂದು ಸಂಭ್ರಮ ಮಹಿಳಾ ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷರಾದ ಕೋಟ್ರಮಾಡ ಅರುಣ್ ಅಪ್ಪಣ್ಣ ಹಾಗೂ ಲೋಟಸ್ಸ್ ರಿಕ್ರಿಯೇಷನ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಪೆಮ್ಮಂಡ ರಾಜಾ ಕುಶಾಲಪ್ಪ ಕೋರಿದರು.

ಹೆಚ್ಚಿನ ಮಾಹಿತಿಗೆ 9449123119 , 9448582408 , 9448647775 , 9945629843 , 9945508983 , 9448720467 ದೂರವಾಣಿ ಸಂಖ್ಯೆಯನ್ನು ಸಂರ್ಕಿಸಬಹುದೆಂದು ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಟಿ.ಶೆಟ್ಟಿಗೇರಿ ಸಂಭ್ರಮ ಮಹಿಳಾ ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಸ್ಥೆಯ ಉಪಾಧ್ಯಕ್ಷೆ ಚಂಗುಲಂಡ ಅಶ್ವಿನಿ ಸತೀಶ್, ಕಾರ್ಯದರ್ಶಿ ಉಳುವಂಗಡ ಕಾವೇರಿ ಉದಯ ಹಾಗೂ ಉಳುವಂಗಡ ಉದಯ ಹಾಜರಿದ್ದರು.