ವೀರಾಜಪೇಟೆ, ಫೆ. 22: ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿಗಾಗಿ ಕೆದಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾರಿಕಾಡುವಿನಲ್ಲಿ ಏಳು ಏಕರೆ ಸರಕಾರಿ ಜಾಗವನ್ನು ಗುರುತಿಸಲಾಗಿದ್ದು, ನಿರಾಶ್ರಿತರ ಪೈಕಿ 176 ಕುಟುಂಬಗಳಿಗೆ ಇಲ್ಲಿ ನಿವೇಶನ ನೀಡಲಾಗುವದು ಎಂದು ಜಿಲ್ಲಾಧಿಕಾರಿ ಡಾ|| ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ. ಕೆದಮುಳ್ಳೂರು ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಸರಕಾರದ ಆದೇಶದಂತೆ ನಿರಾಶ್ರಿತರಿಗೆ ನಿವೇಶನಕ್ಕಾಗಿ ಜಾಗ ನೀಡುವದಲ್ಲದೆ ಹಕ್ಕು ಪತ್ರ ಹೊಂದಿರುವವರಿಗೆ ಮನೆ ನಿರ್ಮಿಸಿ ಕೊಡಲು ಜಿಲ್ಲಾಡಳಿತ ತಯಾರಿದೆ. ಈ ವರ್ಷ ತೀವ್ರ ಬರದ ಹಿನ್ನೆಲೆಯಲ್ಲಿ ಬರ ಪರಿಹಾರಕ್ಕಾಗಿ ಪ್ರತಿ ತಾಲೂಕಿಗೆ ರೂ.40 ಲಕ್ಷಗಳ ವಿಶೇಷ ಅನುದಾನ ಬಂದಿದೆ. ಈ ಹಣವನ್ನು ತಾಲೂಕಿನ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸೂಕ್ತ ಬಳಕೆಗೆ ವಿನಿಯೋಗಿಸಲಾಗುವದು ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸಬೇಕು. ನಿರಾಶ್ರಿತರಿಗೆ ನಿವೇಶನ ಹಂಚುವಾಗ ಕೆದಮುಳ್ಳೂರು ಗ್ರಾಮದಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಬೇಕು ಎಂದರು. ತಾಲೂಕು ಪಂಚಾಯ್ತಿ ಸದಸ್ಯ ಮಾಳೇಟಿರ ಪ್ರಶಾಂತ್, ತಹಶೀಲ್ದಾರ್ ಮಹದೇವ ಸ್ವಾಮಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ಪಡ್ನೇಕರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷೆ ಅನಿತಾ ಉಪಸ್ಥಿತರಿದ್ದರು.