ಗೋಣಿಕೊಪ್ಪಲು, ಫೆ. 22: ಕಾವೇರಿ ಕಾಲೇಜು ವತಿಯಿಂದ ಆಯೋಜಿಸಿದ್ದ ಸಾಕ್ಷಾತ್ಕಾರ ಎಂಬ ರಾಜ್ಯಮಟ್ಟದ ಕಾಮರ್ಸ್ ವಾಣಿಜ್ಯ ನಿರ್ವಹಣೆ ಫೆಸ್ಟ್‍ನ್ನು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಉದ್ಘಾಟಿಸಿದರು.

ಟ್ರೋಫಿ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸದ ನಂತರ ಸ್ಥಳೀಯವಾಗಿ ಉದ್ಯೋಗ ಗಿಟ್ಟಿಸಿಕೊಳ್ಳುವದು ಉತ್ತಮ.

ಈ ನಿಟ್ಟಿನಲ್ಲಿ ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಕೆ. ಪೂವಣ್ಣ ಮಾತನಾಡಿ, ಇಂದಿನ ಯುಗದಲ್ಲಿ ತಂತ್ರಜ್ಞಾನ ಹೆಚ್ಚು ಮುಂದುವರಿಯುತ್ತಿದೆ. ಇದಕ್ಕೆ ನಾವುಗಳು ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಇದರಿಂದಾಗಿ ಸ್ಪರ್ಧೆಯಲ್ಲಿ ಕಲಿತ ಶಿಕ್ಷಣವನ್ನು ಮತ್ತಷ್ಟು ಕರಗತ ಮಾಡಿಕೊಂಡು ಬದುಕಿಗೆ ಬೇಕಾದಂತೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಫೆಸ್ಟ್‍ನಲ್ಲಿ ಮಂಗಳೂರು, ಮೈಸೂರು ಹಾಗೂ ಬೆಂಗಳೂರು ವಿಶ್ವ ವಿದ್ಯಾಲಯಗಳ ಪಿಜಿ ತಂಡಗಳಿಗೆ ನಡೆದ ಪೈಪೋಟಿಯಲ್ಲಿ ಟ್ರೇಸರ್ ಹಂಟ್, ಮಾರ್ಕೆಟಿಂಗ್, ಹ್ಯೂಮನ್ ರಿಸೋರ್ಸ್, ಫೈನಾನ್ಸ್ ಹಾಗೂ ಬೆಸ್ಟ್ ಮ್ಯಾನೇಜರ್ ಸ್ಪರ್ಧೆಗಳು ನಡೆದವು.

ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಎಂಕಾಂ ವಿಭಾಗದ ಮುಖ್ಯಸ್ಥೆ ಡಾ. ಎಸ್. ಎನ್. ಬೀನಾ, ಉಪನ್ಯಾಸಕರುಗಳಾದ ಕೆ ಜಿ ಮುದ್ದಪ್ಪ, ಚಿತ್ರಾವತಿ ಉಪಸ್ಥಿತರಿದ್ದರು.

ಮೇಘಾನ ಹಾಗೂ ಸೋನಿಯ ಪ್ರಾರ್ಥಿಸಿ, ಶಾಕೀರ್ ಸ್ವಾಗತಿಸಿ, ಪವಿತ್ರ ವಂದಿಸಿದರು.