ಮಡಿಕೇರಿ, ಫೆ.22 : ರಾಷ್ಟ್ರದ ಸಂವಿಧಾನವು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ಹೊಂದಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಕಲ್ಪಿಸಿದೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಮಾಸ್ಟರ್ ಆರ್‍ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಅವರು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಕಾರದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ

(ಮೊದಲ ಪುಟದಿಂದ) ಮಹಿಳಾ ಕಾಲೇಜಿನಲ್ಲಿ ‘ಮೂಲಭೂತ ಹಕ್ಕುಗಳ’ ಕುರಿತು ಬುಧವಾರ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾಗಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಹಕ್ಕು, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರ ಹಕ್ಕುಗಳನ್ನು ನೀಡಲಾಗಿದೆ. ಆದ್ದರಿಂದ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು ಎಂದರು.

ಬಡವ-ಬಲ್ಲಿದ, ಗಂಡು-ಹೆಣ್ಣು, ಮೇಲು-ಕೀಳು ಎಂಬ ಭಾವನೆ ಇರಬಾರದು, ಎಲ್ಲರೂ ಸಮಾನರು ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದ್ದು, ಮತ್ತೊಬ್ಬರಿಗೆ ನೋವು ಉಂಟಾಗದಂತೆ ನಡೆದುಕೊಳ್ಳಬೇಕು.

‘ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ ಎಂದು ಮನಬಂದಂತೆ ವರ್ತಿಸುವಂತಿಲ್ಲ. ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ನಡೆದುಕೊಳ್ಳಬೇಕು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಮಾಸ್ಟರ್ ಆರ್‍ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ತಿಳಿಸಿದರು.’

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಇದ್ದು, ಅದನ್ನು ಪಾಲನೆ ಮಾಡಬೇಕು. ಧರ್ಮ, ಜನಾಂಗ, ಜಾತಿ, ಲಿಂಗ ತಾರತಮ್ಯ ಮಾಡುವಂತಿಲ್ಲ, ಅಂಗಡಿ, ಹೊಟೇಲ್, ಬಾವಿ, ಕೆರೆ, ಕಟ್ಟೆ, ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಸ್ಥಳಗಳಲ್ಲಿ ಯಾವದೇ ನಿರ್ಬಂಧ ವಿಧಿಸುವಂತಿಲ್ಲ ಎಂದರು.

ರಾಷ್ಟ್ರದ ಸಾರ್ವಭೌಮ ಹಾಗೂ ಅಖಂಡತೆ, ಸಾರ್ವಜನಿಕ ಸುವ್ಯವಸ್ಥೆ ಉಲ್ಲಂಘಿಸಿದಾಗ ಆತನನ್ನು ಶಿಕ್ಷೆಗೆ ಗುರಿಪಡಿಸಬಹುದು. ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಮಾತನಾಡಿ ಮೂಲಭೂತ ಹಕ್ಕುಗಳನ್ನು ಉಪಯೋಗಿಸಿಕೊಂಡು ಜೀವನ ವನ್ನು ಉತ್ತಮಪಡಿಸಿಕೊಳ್ಳಬೇಕು. ಸ್ವಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದರು.

ನಗರಸಭೆ ಸದಸ್ಯೆ ಅನಿತಾ ಪೂವಯ್ಯ ಮಾತನಾಡಿ ದೇಶ ಸ್ವಾತಂತ್ರ್ಯ ಹೊಂದುವದಕ್ಕೂ ಮೊದಲು ಅಸಮಾನತೆ, ಶೋಷಣೆ, ಲಿಂಗ ತಾರತಮ್ಯವಿತ್ತು. ಸ್ವಾತಂತ್ರ್ಯ ನಂತರ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು, ಅವಕಾಶಗಳು, ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಲಾಗಿದೆ ಎಂದು ಅವರು ಹೇಳಿದರು.

ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬೇಕು. ‘ಸಂವಿಧಾನವೇ ಪ್ರತಿಯೊಬ್ಬರಿಗೂ ಆತ್ಮ’ ಎಂದರು.

ಉಪನ್ಯಾಸಕ ಕೆ.ಸಿ. ದಯಾನಂದ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಜೆನ್ನಿಫರ್ ಲೋಲಿಟ ಇದ್ದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶ್ವಿತ ನಿರೂಪಿಸಿದರು, ಶೃತಿ ಪ್ರಾರ್ಥಿಸಿದರು, ಕಾನಾನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ ವಂದಿಸಿದರು.