ಮಡಿಕೇರಿ ಫೆ. 22: ಪಾಲೆÉೀಮಾಡಿನ ಸ್ಮಶಾನ ಜಾಗದ ವಿವಾದವನ್ನು ಪರ-ವಿರೋಧ ಎರಡೂ ಗುಂಪುಗಳ ಸಮಿತಿಯ ಮೂಲಕ ಶಾಂತಿಯುತವಾಗಿ ಬಗೆಹರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಪಿ.ಎ. ಮಹಮ್ಮದ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಇಂದು ಸ್ಮಶಾನದ ಜಾಗದ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿರುವದಲ್ಲದೆ, ಗುಂಪುಗಾರಿಕೆ ಉಂಟುಮಾಡಿ ಅಶಾಂತಿ ಸೃಷ್ಟಿಸಲಾಗುತ್ತಿದೆಯೆಂದು ಆರೋಪಿಸಿದರು. ಹೊದ್ದೂರು ಪಾಲೇಮಾಡು ಪೈಸಾರಿಯಲ್ಲಿ ಸುಮಾರು 300 ಕುಟುಂಬಗÀಳು ಕಳೆದ 10 ವರ್ಷಗಳಿಂದ ವಾಸ ಮಾಡುತ್ತಿವೆ. ಜಾತಿ, ಧರ್ಮ, ಮತ ಪಕ್ಷಗಳ ಭೇದ ಮರೆತು ಹಕ್ಕುಪತ್ರಕ್ಕಾಗಿ ಒಗ್ಗಟ್ಟಿನ ಹೋರಾಟ ನಡೆದಿದೆ. ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ 94 ಸಿ ಅರ್ಜಿ ಸಲ್ಲಿಸಲು ಅವಕಾಶ ದೊರೆತಿದೆ.
ಆದರೆ, ಸ್ಥಳೀಯ ಕೆಲವು ಬಿಜೆಪಿ ಪ್ರಮುಖರು ಬಡವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದ್ದಾರೆಂದು ಆರೋಪಿಸಿದರು.
ಈ ಭೂ ಮಂಜೂರಾತಿ ಬಡವರ ವಿರುದ್ಧವಾಗಿದ್ದು, ವಿವಾದದಲ್ಲಿ ರಾಜಕೀಯ ಪ್ರವೇಶ ಪಡೆದು ದಲಿತರನ್ನು ದಮನಿಸುವ ಯತ್ನ ನಡೆಯುತ್ತಿದೆಯೆಂದು ಟೀಕಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಅವರ ಸಲಹೆಯಂತೆ ಎರಡೂ ಕಡೆಯವರ ಸಮಿತಿ ರಚಿಸಿ ವಿವಾದವನ್ನು ಬಗೆಹರಿಸಿಕೊಳ್ಳುವದು ಸೂಕ್ತವೆಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿ, ಸ್ಮಶಾನದ ಜಾಗಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಗೋಡೆ ಮೇಲೆ ದೀಪ ಇಟ್ಟಂತೆ ವರ್ತಿಸುತ್ತಿದೆಯೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಪಿ.ಯು. ಫಿರ್ದೌಸ್, ಪಾಲೇಮಾಡು ಹೋರಾಟ ಸಮಿತಿ ಸದಸ್ಯರಾದ ಸುಮಿತ್ರ ಹಾಗೂ ಶಾಂತಿ ಉಪಸ್ಥಿತರಿದ್ದರು.