ಕೂಡಿಗೆ, ಫೆ. 22: ನಾಯಕತ್ವ ವಹಿಸುವ ವ್ಯಕ್ತಿ ತನ್ನ ಸುತ್ತಮುತ್ತಲಿನ ಜನರ ಭಾವನೆಗಳನ್ನು ಸೂಕ್ಷ್ಮವಾಗಿ ಅರಿತು ಅವರ ಸಾಧಕ-ಬಾಧಕಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಗಬೇಕು. ಆಗ ಮಾತ್ರ ನಾಯಕತ್ವಕ್ಕೆ ಬೆಲೆ ಬರುತ್ತದೆ ಎಂದು ಹಿರಿಯ ಉಪನ್ಯಾಸಕ ಸಬಲಂ ಭೋಜಣ್ಣ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿಗೆ ಸಮೀಪದ ಮಂಗಳೂರು ವಿವಿ ಚಿಕ್ಕಳುವಾರ ಸ್ನಾತಕ್ಕೋತ್ತರ ಕೇಂದ್ರದ ಸಮಾಜ ಸೇವೆ ಅಧ್ಯಯನ ವಿಭಾಗದಿಂದ ಮಾಲಂಬಿ ಗ್ರಾಮದ ಗಿರಿಜನರ ಹಾಡಿ ಆಶ್ರಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಅಧ್ಯಯನ ಶಿಬಿರದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಭಾರತದ ವಿಚಾರಗಳನ್ನು ಅರಿತು ನಾಯಕತ್ವ ಬೆಳೆಸಿಕೊಳ್ಳಬೇಕು. ಪುರಾಣ ಮತ್ತು ಇತಿಹಾಸದ ವ್ಯಕ್ತಿಗಳು ಆಯಾ ಕಾಲಕ್ಕೆ ಯಾವ ರೀತಿಯಲ್ಲಿ ನಾಯಕರಾಗಿ ತಮ್ಮೊಂದಿಗೆ ಸಮಾಜವನ್ನು ಕೊಂಡೊಯ್ದರೋ, ಆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿದರೋ ಅಂತಹ ವಿಚಾರಗಳ ಸೂಕ್ಷ್ಮತೆಯ ಅರಿವು ಇರಬೇಕು ಎಂದರು.

ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅಶ್ವಥ್ ಕುಮಾರ್ ಮಾತನಾಡಿ, ಗ್ರಾಮೀಣ ಅಧ್ಯಯನ ಕೇವಲ ಅಧ್ಯಯನಕ್ಕೋಸ್ಕರ ಅಧ್ಯಯನವಾಗಬಾರದು. ಗ್ರಾಮೀಣ ಬದುಕಿನ ವಿವಿಧ ಮಗ್ಗುಲುಗಳನ್ನು ಅರಿತು ಅವರ ಏಳು-ಬೀಳುಗಳನ್ನು ದಾಖಲಿಸಬೇಕು. ಅವರ ಪುರೋಭಿವೃದ್ಧಿಗೆ ಬೇಕಾಗುವ ಪರಿಹಾರಗಳನ್ನು ಹುಡುಕಬೇಕು ಎಂದರು.

ವೇದಿಕೆಯಲ್ಲಿ ಶಿಬಿರಾಧಿಕಾರಿಗಳು, ಸ್ನಾತ್ತಕ್ಕೋತ್ತರ ಕೇಂದ್ರದ ಉಪನ್ಯಾಸಕ ಲೋಕೇಶ್ ಭರಣಿ, ಹರಿಣಾಕ್ಷಿ, ರಾಬಿನ್ ಇದ್ದರು. ಶಿಬಿರದ ನಾಯಕ ಕಿಶೋರ್ ಕಾರ್ಯಕ್ರಮ ನಿರ್ವಹಿಸಿದರು.