ಕುಶಾಲನಗರ, ಫೆ. 22: ಕುಶಾಲನಗರ ಕಾವೇರಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಿರ್ಮಾಣಗೊಂಡ ಸರಕಾರಿ ಪಾಲಿಟೆಕ್ನಿಕ್ ಸುವರ್ಣ ಮಹೋತ್ಸವ ಭವನದ ನೂತನ ಕಟ್ಟಡ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಘದ ಗೌರವಾಧ್ಯಕ್ಷ ಹೆಚ್.ವಿ. ಶಿವಪ್ಪ ತಿಳಿಸಿದ್ದಾರೆ.

ಅವರು ಸುವರ್ಣ ಭವನದ ಸಭಾಂಗಣದಲ್ಲಿ ನಡೆದ ಮಹಾಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಂದಾಜು 40 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಭವನ ಹಳೆ ವಿದ್ಯಾರ್ಥಿಗಳ ನೆನಪಿಗಾಗಿ ನಿರ್ಮಾಣಗೊಳ್ಳುತ್ತಿದ್ದು ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಉತ್ತಮ ಭವನ ರೂಪುಗೊಂಡಿದೆ. ಈ ಸಭಾಂಗಣ ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಬಳಸಲಾಗುವದೆಂದು ತಿಳಿಸಿದ್ದಾರೆ.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಎಂ.ಕೆ. ದಿನೇಶ್ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರುಗಳು ಅನುದಾನ ಕಲ್ಪಿಸಿದ್ದು ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕಟ್ಟಡ ನಿರ್ಮಾಣಗೊಂಡಿದೆ. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಹೆಚ್.ವಿ. ಶಿವಪ್ಪ ನೇತೃತ್ವದಲ್ಲಿ ಭವನ ನಿರ್ಮಾಣಗೊಂಡಿದ್ದು ಕೆಲಸ ಕಾರ್ಯಗಳು ಅಂತಿಮ ರೂಪಕ್ಕೆ ಬಂದಿದೆ. ಏಪ್ರಿಲ್ 2 ರಂದು ಕಟ್ಟಡ ಲೋಕಾರ್ಪಣೆ ಮಾಡಲು ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಳೆಯ ವಿದ್ಯಾರ್ಥಿಗಳು ಸುವರ್ಣ ಮಹೋತ್ಸವ ಭವನ ನಿರ್ಮಾಣ ಸಮಿತಿಗೆ ವಂತಿಗೆ ನೀಡುವ ಮೂಲಕ ಸಹಕರಿಸುವಂತೆ ಅವರು ಕೋರಿದ್ದಾರೆ. ಈ ಸಂದರ್ಭ ಸಂಘದ ಕಾರ್ಯದರ್ಶಿ ಎನ್.ಎಸ್. ಲೋಕೇಶ್, ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಜಿ.ಸಿ. ಲಿಂಗರಾಜು, ಸಂಘದ ನಿರ್ದೇಶಕರುಗಳು ಹಾಗೂ ಸದಸ್ಯರುಗಳು, ಕಾಲೇಜಿನ ಉಪನ್ಯಾಸಕರು ಇದ್ದರು.