ಮಡಿಕೇರಿ, ಫೆ. 23: ಆಶ್ರಮ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ವೇತನ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸೂಚನೆ ನೀಡಿದ್ದಾರೆ.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಗುರುವಾರ ನಡೆದ ಜಿ.ಪಂ. ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಆಶ್ರಮ ಶಾಲೆ ಶಿಕ್ಷಕರಿಗೆ ವೇತನ ಹೆಚ್ಚಳ ಮಾಡುವಂತಾಗಲು ಹಲವು ಬಾರಿ ಜಿ.ಪಂ. ಸಾಮಾನ್ಯ ಹಾಗೂ ಕೆಡಿಪಿ ಸಭೆಗಳಲ್ಲಿ ಪ್ರಸ್ತಾಪ ಮಾಡಿದರೂ ಸಹ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಜಿ.ಪಂ. ಅಧ್ಯಕ್ಷರು ಅತೃಪ್ತಿ ವ್ಯಕ್ತಪಡಿಸಿದರು.

ಆಶ್ರಮ ಶಾಲೆಗಳಲ್ಲಿ ಶಿಕ್ಷಕರಿಗೆ 5,600 ರೂ. ವೇತನ ನೀಡುವದು ತೃಪ್ತಿ ಇದೆಯೇ ಎಂದು ಪ್ರಶ್ನಿಸಿದ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅವರು ಆಶ್ರಮ ಶಾಲೆ ಶಿಕ್ಷಕರಿಗೆ 5,600 ರೂ. ವೇತನ ಸಾಲುವದಿಲ್ಲ. ಈ ಸಂಬಂಧ 10 ಸಾವಿರ ರೂ.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ, ಮಾರ್ಗದರ್ಶನ ನೀಡಬೇಕು. ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಬಯೋ ಮೆಟ್ರಿಕ್ ಅಳವಡಿಸಬೇಕು. ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತಾಗಲು ವಿಶೇಷ ಗಮನಹರಿಸಬೇಕು ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ನಿರ್ದೇಶನ ನೀಡಿದರು.

ದಿಡ್ಡಳ್ಳಿಯ ಮೂಲ ನಿವಾಸಿ ಗಿರಿಜನರಿಗೆ ವಸತಿ ಕಲ್ಪಿಸುವ ಸಂಬಂಧ ಯಾವ ಹಂತಕ್ಕೆ ಬಂದಿದೆ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಮಾಹಿತಿ ಬಯಸಿದರು.

ಈ ಕುರಿತು ಮಾತನಾಡಿದ ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಅವರು ದಿಡ್ಡಳ್ಳಿಯ 577 ಕುಟುಂಬಗಳಿಗೆ ಲಾಟರಿ ಮೂಲಕ ಈಗಾಗಲೇ ನಿವೇಶನ ಹಂಚಿಕೆ ಮಾಡಲಾಗಿದೆ. ಬಸವನಹಳ್ಳಿ, ಮುಳ್ಳುಸೋಗೆ, ರಾಂಪುರದಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಮಾತನಾಡಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಅವರು ರಾಂಪುರ ಬಳಿ ಗುರುತಿಸಲಾಗಿರುವ ಜಾಗವು ಬೆಟ್ಟದಿಂದ ಆವೃತ್ತವಾಗಿದೆ. ಇಲ್ಲಿ ನಿವೇಶನ ನೀಡುವದರಿಂದ ಯಾವದೇ ಪ್ರಯೋಜನವಿಲ್ಲ. ಇಲ್ಲಿ ನಿವೇಶನ ಹಂಚಿಕೆ ಮಾಡುವದರಿಂದ ಹಾರಂಗಿ ಜಲಾಶಯಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಡವರಿಗೆ ನೀಡಲಾಗಿರುವ ಎಪಿಎಲ್ ಕಾರ್ಡ್‍ಗಳನ್ನು ಬದಲಿಸಿಕೊಳ್ಳಲು, ಸರ್ಕಾರ ಆದೇಶ ಹೊರಡಿಸಿದ್ದು, ಈ ಸಂಬಂಧ ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಹೆಚ್ಚಿನ ಅರಿವು ಮೂಡಿಸುವಂತೆ, ಅಕ್ರಮ ವಲಸಿಗರ ಬಗ್ಗೆ ನಿಗಾ ಇಡಬೇಕು ಎಂದು ಸಲಹೆ ಮಾಡಿದರು.

ವಸತಿ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿ.ಪಂ. ಯೋಜನಾ ನಿರ್ದೇಶಕ ಸಿದ್ದಲಿಂಗ ಮೂರ್ತಿ ಅವರು 2013-14 ರಿಂದ 2015-16ನೇ ಸಾಲಿನವರೆಗೆ ಇಂದಿರಾ ಆವಾಜ್ ಯೋಜನೆಯಡಿ 2046 ಮನೆಗಳನ್ನು ಪೂರ್ಣಗೊಳಿಸಲಾಗಿದೆ. 550 ಪ್ರಗತಿಯಲ್ಲಿದೆ. ಬಸವ ವಸತಿ ಯೋಜನೆಯಡಿ 3,283 ಗುರಿಯಲ್ಲಿ 2,210 ಪೂರ್ಣಗೊಂಡಿದ್ದು, 600 ಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹಾಗೆಯೇ ಅಂಬೇಡ್ಕರ್ ವಸತಿ ಯೋಜನೆಯಡಿ ಹಲವು ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ನಿವೇಶನ ಇಲ್ಲದಿರುವದರಿಂದ ಕೆಲವು ವಸತಿ ಯೋಜನೆಗಳು ಕುಂಠಿತ ಗೊಂಡಿವೆ ಎಂದು ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಬಾಕಿ ಇರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಹೋಂ ಸ್ಟೇಗಳಿದ್ದು, ಕೇವಲ 404 ಹೋಂಸ್ಟೇಗಳು ಮಾತ್ರ ನೋಂದಣಿ ಯಾಗಿವೆ. ಈ ನಿಟ್ಟಿನಲ್ಲಿ ಎಲ್ಲಾ ಹೋಂ ಸ್ಟೇಗಳು ಕಡ್ಡಾಯವಾಗಿ ನೋಂದಣಿ ಯಾಗಬೇಕು. ಜೊತೆಗೆ ತೆರಿಗೆಯನ್ನು ಕಡ್ಡಾಯವಾಗಿ ಸಂಗ್ರಹಿಸ ಬೇಕು. ತೆರಿಗೆಯಿಂದ ಯಾರೂ ಸಹ ವಂಚಿತರಾಗಬಾರದು ಎಂದು ಮೂಕೊಂಡ ಶಶಿ ಸುಬ್ರಮಣಿ ಒತ್ತಾಯಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ ಜಿಲ್ಲೆಯ ಕೆಲವು ಹೋಂ ಸ್ಟೇಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಹೋಂ ಸ್ಟೇಗಳಲ್ಲಿನ ಘನ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಬಿಸಾಡುತ್ತಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲೆಯಲ್ಲಿರುವ ಎಲ್ಲಾ ಹೋಂ ಸ್ಟೇ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಹೋಂ ಸ್ಟೇ ಅಸೋಸಿಯಷೇನ್ ಗಮನಕ್ಕೆ ತರಲಾಗುವದು ಎಂದು ಜಿ.ಪಂ. ಸಿಇಓ ಹೇಳಿದರು.

ಜಿಲ್ಲೆಯ ನಾನಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ ಹೊಸ ಆಂಬ್ಯುಲೆನ್ಸ್ ವಾಹನಗಳನ್ನು ತರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಲಾಯಿತು.

ತಾಲೂಕು ಮಟ್ಟದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಗೆ ಬಜೆಟ್ ನಿಗದಿಪಡಿಸುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಸಲಹೆ ಮಾಡಿದರು.

ಜಿಲ್ಲೆಯ ವಿವಿಧ ಹಾಡಿ ಪ್ರದೇಶಗಳಲ್ಲಿ ಶಾಲೆಗೆ ಮಕ್ಕಳನ್ನು ಖಾಸಗಿ ವಾಹನದಲ್ಲಿ ಕರೆತರಲಾಗು ತ್ತದೆ. ಇದಕ್ಕಾಗಿ ಖಾಸಗಿ ವಾಹನದ ಬಾಡಿಗೆ ಸೌಲಭ್ಯ ಕಲ್ಪಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಅವರು ಜೇನು ಕೃಷಿ ಉತ್ತೇಜನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.

ಈ ಸಂಬಂಧ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಬಿ.ಆರ್.ಗಿರೀಶ್ ಜೇನು ಸಾಕಾಣಿಕೆ ಸಂಬಂಧ ಮೂರು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೇನುಪೆಟ್ಟಿಗೆ ಮತ್ತು ಸಹಾಯಧನ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ 20 ಕೆರೆಗಳ ಅಭಿವೃದ್ಧಿಗೆ ಮುಂದಾಗಲಾಗಿದೆ ಎಂದು ಜಿ.ಪಂ.ಎಇಇ ತಿಳಿಸಿದರು. ಕುಶಾಲನಗರ ಕಲಾಭವನಕ್ಕೆ 2 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪ ಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು.