ಶನಿವಾರಸಂತೆ, ಫೆ. 23: ಕೊಡಗಿನ ಗಡಿ ಭಾಗವಾದ ಬೆಸೂರು ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಗವಿಸಿದ್ದೇಶ್ವರನ ಜಾತ್ರೆ ತಾ. 25 ರಂದು ನಡೆಯಲಿದೆ. ಪ್ರತಿ ವರ್ಷ ಮಹಾಶಿವರಾತ್ರಿಯ ಮಾರನೇ ದಿನ ನಡೆಯುವ ಈ ಜಾತ್ರೆಗೆ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ.
ಸುಮಾರು 500 ವರ್ಷಗಳ ಹಿಂದೆ ವೀರರಾಜನ ಆಳ್ವಿಕೆ ಕಾಲದಲ್ಲಿ ಈ ಸ್ಥಳಕ್ಕೆ ಮುಳ್ಳೂರು ಎಂಬ ಹೆಸರಿತ್ತು. ಮುಳ್ಳೂರಿನಲ್ಲಿದ್ದುದು ಕೇವಲ ಐವರು ಶಿವಶರಣರ ಮನೆಗಳು ಗೊಂಡರಣ್ಯದಂತಿದ್ದ ಗ್ರಾಮದಲ್ಲಿ ಹುಲಿ, ಚಿರತೆ ಹಾಗೂ ಕಾಡಾನೆಗಳು ಇದ್ದವು. ಗ್ರಾಮದ ಗವಿಸಿದ್ದೇಶ್ವರ ಎಂಬ ಸಾದು ಬೃಹದಾಕಾರದ ಗವಿಯೊಳಗಡೆ ವಾಸವಾಗಿದ್ದ. ತಪಸ್ಸು ಭಿಕ್ಷಾಟನೆ ಮಾಡುತ್ತಲೇ ಮೃತನಾದ. ಮುಕ್ತಿ ಕರುಣಿಸಲು ಶಿವಕೈಲಾಸದಿಂದ ಬರುವ ಮೊದಲೇ ಸಾಧುವಿನ ಕೊರಳ ಕರಡಿಯ ಮುಚ್ಚಳ ಕಳಚಿ ಲಿಂಗ ಭೂಸ್ಪರ್ಶವಾಯಿತು. ಭಕ್ತಿಗೆ ಮಾರು ಹೋದ ಶಿವ ಅಲ್ಲಿಯೇ ನಿಂತು ಬ್ರಹ್ಮಾಂಡವಾದ ಎನ್ನುತ್ತಾರೆ ಗ್ರಾಮದ ಹಿರಿಯಜ್ಜಿ.
ರಾಜವೀರರಾಜ ತನ್ನ ಆಳ್ವಿಕೆಗೆ ಒಳಪಟ್ಟ ನೆಲದ ವಿಸ್ತೀರ್ಣ ಗುರುತಿಸಿ ಗಡಿಕಲ್ಲನ್ನು ಪ್ರತಿಷ್ಠಾಪಿಸಲು ತನ್ನಲ್ಲಿದ್ದ ಅಶ್ವದಳ ಕಾಲಾಳುಗಳನ್ನು ಕಳುಹಿಸಿದ್ದು ಸುತ್ತಾಡಿದ ರಾಜನ ದಂಡು ಆಯಾಸಗೊಂಡು ಮುಳ್ಳೂರಿನಲ್ಲಿ ಕುದುರೆಗಳನ್ನು ಕಟ್ಟಿ ಹಾಕಿ ಮರದ ಕೆಳಗಡೆ ಮಲಗಿದರು. ಸೈನದ ಧಳಪತಿ ಗುಹೆಯೊಳಗೆ ಮಲಗಿದ್ದು ಕನಸೊಂದು ಬಿದ್ದು ಇಲ್ಲಿ ನನಗೊಂದು ಕೊಳವನ್ನು ನಿರ್ಮಿಸು, ನಿನಗೂ, ಸೈನ್ಯಕ್ಕೂ ಮತ್ತು ನಿನ್ನ ರಾಜ ವಂಶಕ್ಕೂ ಒಳ್ಳೆಯದಾಗುತ್ತದೆ ಎಂದಂತಾಗುತ್ತದೆ. ಆ ಕನಸಿನ ವಿಚಾರ ರಾಜನಿಗೂ ತಿಳಿಸಿ ವೀರರಾಜ ಕುದುರೆ ಸಾರೋಟಿನಲ್ಲಿ ಬಂದು ಆ ಗುಹೆಯಲ್ಲಿ ಮಲಗಿ ನಿದ್ರಿಸುವಾಗ ರಾಜನ ಕನಸಿನಲ್ಲಿಯು ಸಹ ಶಿವಲಿಂಗ ದರ್ಶನ ಕಂಡು ಆ ಕೂಡಲೆ ರಾಜನ ಆಜ್ಞೆಯಂತೆ ಸೈನ್ಯವು ಒಂದೇ ರಾತ್ರಿಯಲ್ಲಿ ಕೊಳ ನಿರ್ಮಿಸಿತು.
ಕಲ್ಲುಗಳ ಮೇಲೆ ದಂಡಿನ ಭಾವಿ ಧಳವಾಯಿ ಕೆರೆ ಎಂದು ನಾಮಕರಣ ಮಾಡಲಾಯಿತು. ಲಿಂಗ ರೂಪಿ ಭಗವಂತ ರಾಜನಿಗೆ ತಿಳಿಸಿದ ಪ್ರಕಾರ ಕೊಳದಲ್ಲಿ 365 ದಿನಗಳಲ್ಲಿಯು ಸದಾ ನೀರು ತುಂಬಿ ತುಳುಕುತಿತ್ತು. ಆ ಕೊಳದಲ್ಲಿ ಪ್ರತಿ ಮಾಸದ ಅಮವಾಸ್ಯೆ ಕೃಷ್ಣ ಪಕ್ಷದ ಮಧ್ಯರಾತ್ರಿಯಲ್ಲಿ ಶಂಖ ಮತ್ತು ಜಾಗಟೆಯ ಸದ್ದು ಕೇಳಿ ಬರುತ್ತಿದ್ದು ಭಗವಂತ ತಾನಿರುವ ಗೋಚರವನ್ನು ಭಕ್ತರಿಗೆ ತೋರಿಸುತ್ತಿದ್ದನಂತೆ. 1984ರಲ್ಲಿ ಅರಣ್ಯ ಇಲಾಖೆ ನರ್ಸರಿ ಬೆಳೆಸಲು ಹಾಗು ತೇಗದ ಕಾಡನ್ನು ನಿರ್ಮಿಸಲು ಕೊಳದ ನೀರನ್ನು ಪೂರ್ಣವಾಗಿ ಖಾಲಿ ಮಾಡಿತು ಎನ್ನಲಾಗಿದೆ. ಅಂದಿನಿಂದ ಶಂಖ ಜಾಗಟೆಯ ಶಬ್ಧ ನಿಂತು ಹೋಯಿತು ಎಂದು ಹೇಳುತ್ತಾರೆ. ಕ್ರಮೇಣ ಮುಳ್ಳೂರು ಹೆಸರು ಹೋಗಿ ಆಗಳಿ ಎಂಬ ಹೆಸರು ಬಂದಿತು.
ಗ್ರಾಮದ ಪಟೇಲ ಹಾಗೂ ಜಮೀನ್ದಾರ ಸಿದ್ದಯ್ಯ ಅವರು ಬಂಡೆಗಲ್ಲಿನ ಗವಿಯನ್ನು ಅಲ್ಪಸ್ವಲ್ಪ ಕೆತ್ತಿಸಿ ಬಾಗಿಲು, ಕಿಟಕಿ ನಿರ್ಮಿಸಿದ್ದಾರೆ. 1987 ರಿಂದ ಪಂಚಾಯಿತಿ ಹಾಗೂ ಗ್ರಾಮಸ್ಥರು ಪ್ರತಿ ಶಿವರಾತ್ರಿ ಹಬ್ಬದ ಮಾರನೇ ದಿನ ಗವಿಸಿದ್ದೇಶ್ವರ ಸ್ವಾಮಿಗೆ ಅಭಿಷೇಕ ಪೂಜೆ ಹಾಗೂ ಜಾತ್ರೆ ಆಚರಿಸುತ್ತಾರೆ. ತಾ. 25 ರಂದು ಗವಿಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಜೊತೆ ಜಾತ್ರೆ ನಡೆಯುತ್ತದೆ.