ಶನಿವಾರಸಂತೆ, ಫೆ. 23: ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅಕ್ಷರ ಜ್ಞಾನದೊಂದಿಗೆ ಉಜ್ವಲ ಭವಿಷ್ಯ ರೂಪಿಸಲಿವೆ ಎಂದು ‘ಶಕ್ತಿ ಸಂಪಾದಕ ಬಿ.ಜಿ. ಅನಂತಶಯನ ನುಡಿದರು.

ಇಲ್ಲಿನ ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿ ದ್ದರು. ನಮ್ಮ ಹಿರಿಯರು ಊರಿಗೊಂದು ಶಾಲೆ, ದೇಗುಲ, ಆಸ್ಪತ್ರೆಯ ಅವಶ್ಯಕತೆ ಬಗ್ಗೆ ಹೊಂದಿದ ಆಶಯವನ್ನು ಸುಪ್ರಜ ವಿದ್ಯಾಸಂಸ್ಥೆಯ ಸ್ಥಾಪಕಿ ಸುಜಲಾದೇವಿ ಅವರು ಕಾರ್ಯಗತಗೊಳಿಸಿರುವದು ಶ್ಲಾಘನೀಯ ಎಂದು ಅನಂತಶಯನ ನುಡಿದರು. ವಿದ್ಯಾವಂತ ಯುವ ಸಮೂಹ ಉದ್ಯೋಗ ಲಭಿಸದ ಸನ್ನಿವೇಶ ಎದುರಿಸುತ್ತಿರುವಾಗ, ಯಾವದೇ ಕೆಲಸವಾದರೂ ಶ್ರದ್ಧೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ತಿಳಿಹೇಳಿದ ಅವರು ಬಹುಮುಖದ ಕಾಯಕದೆಡೆಗೆ ಗಮನವಿಡುವಂತೆ ಕರೆ ನೀಡಿದರು.

ನೂತನ ಕಟ್ಟಡಕ್ಕೆ ಚಾಲನೆ ನೀಡಿದ ಅನುದಾನ ರಹಿತ ಶಾಲಾ ಒಕ್ಕೂಟ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡುತ್ತಾ, ಪೋಷಕರು ಮಕ್ಕಳಿಗೆ ಒತ್ತಡವಾಗದಂತೆ ಪ್ರತಿಭೆಗೆ ತಕ್ಕಂತೆ ವಿದ್ಯೆ ಕಲಿಸಲು ಮುಂದಾಗುವಂತೆ ಸಲಹೆ ನೀಡಿದರು. ಶಾಲೆಗಳಲ್ಲಿ ಕೂಡ ಶಾರೀರಿಕ, ಮಾನಸಿಕ, ಸಂಸ್ಕಾರಪೂರ್ಣ, ಕಲಿಕೆಯತ್ತ ಮಕ್ಕಳನ್ನು ಪ್ರೋತ್ಸಾಹಿಸಲು ಅವರು ಕರೆ ನೀಡಿದರು.

ಜಿ.ಪಂ. ಸದಸ್ಯೆ ಸರೋಜಮ್ಮ ಅವರು ಮಾತನಾಡಿ, ಗುಲಾಬಿಯು ಮುಳ್ಳಿನ ಗಿಡದಲ್ಲಿ ಅರಳುವಂತೆ, ಕಷ್ಟದ ಹಾದಿಯಲ್ಲೂ ಸುಪ್ರಜ ವಿದ್ಯಾಸಂಸ್ಥೆ ತಲೆ ಎತ್ತಿದ್ದು, ಸಂಸ್ಥೆಯ ಏಳಿಗೆಗೆ ಎಲ್ಲರೂ ಸಹಕರಿಸುವಂತೆ ಕಳಕಳಿ ವ್ಯಕ್ತಪಡಿಸಿದರು. ನಿವೃತ್ತ ಶಿಕ್ಷಣ ಅಧಿಕಾರಿ ಕೃಷ್ಣರಾಜ್ ಈ ವೇಳೆ ಮಾತನಾಡುತ್ತಾ, ಶಿಕ್ಷಣ ಯಾರ ಸ್ವತ್ತು ಅಲ್ಲವೆಂದು ಪ್ರತಿಪಾದಿಸಿದರಲ್ಲದೆ, ಮಕ್ಕಳ ಬುದ್ಧಿ, ಬೆಳವಣಿಗೆಗೆ ಪೂರಕ ಕಲಿಕೆ ಅಗತ್ಯವೆಂದು ತಿಳಿಹೇಳಿದರು.

ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಶನಿವಾರಸಂತೆಯಲ್ಲಿ ಅತ್ಯಂತ ಪರಿಶ್ರಮದಿಂದ ಪ್ರಾರಂಭಗೊಂಡಿರುವ ಸುಪ್ರಜ ಶಾಲೆಯ ಉನ್ನತಿಗಾಗಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು. ತಾ.ಪಂ. ಸದಸ್ಯ ಹೆಚ್. ಅನಂತ್‍ಕುಮಾರ್ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡು, ವಿದ್ಯಾಸಂಸ್ಥೆಗಳು ಬಡವ - ಬಲ್ಲಿದ ಅಥವಾ ಮತೀಯ ನೆಲೆಯಿಂದ ಹೊರತಾಗಿ ಸಮಾನತೆಯ ಶಿಕ್ಷಣ ಕಲಿಸುವಂತೆ ಕರೆ ನೀಡಿದರು.

ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಗಿರೀಶ್ ಮೊದಲಾದವರು ಸುಪ್ರಜ ವಿದ್ಯಾಸಂಸ್ಥೆ ಉತ್ತುಂಗಕ್ಕೆ ಬೆಳೆಯಲೆಂದು ಶುಭ ಹಾರೈಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಹಾಗೂ ಪ್ರಾಂಶುಪಾಲೆ ಸುಜಲಾದೇವಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿವಿಧ ಪ್ರಮುಖ ರಾದ ದೇವೇಂದ್ರ ಪ್ರಸಾದ್, ರಾಮಚಂದ್ರಮೂರ್ತಿ, ಕೆಂಚಣ್ಣ, ಜ್ಞಾನಮೂರ್ತಿ, ಶಿವಣ್ಣ, ಮುಕುಂದ, ಚಂದ್ರಶೇಖರ್ ಉಪಸ್ಥಿತರಿದ್ದರು. ಕಟ್ಟಡ ಗುತ್ತಿಗೆದಾರ ಹೆಚ್.ಪಿ. ಜಯಚಂದ್ರ ಹಾಗೂ ಅಜಯ್ ಬಿಹಾರ್ ಸೇರಿದಂತೆ ಅತಿಥಿ ಗಣ್ಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಶಾಲಾ ಶಿಕ್ಷಕಿ ಲುಚಿತ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ದೊಂದಿಗೆ ಜರುಗಿದ ಸಮಾರಂಭದಲ್ಲಿ ಕಾರ್ಯದರ್ಶಿ ಗುರುಪ್ರಸಾದ್ ಪ್ರಾಸ್ತಾವಿಕ ನುಡಿಯೊಂದಿಗೆ ವಂದಿಸಿದರು.