ಶನಿವಾರಸಂತೆ, ಫೆ. 24: ಶನಿವಾರಸಂತೆಯಿಂದ 12 ಕಿ.ಮೀ. ದೂರದ ಮಾಲಂಬಿ ಬೆಟ್ಟದಲ್ಲಿರುವ ಮಳೆಮಲ್ಲೇಶ್ವರ ದೇವಾಲಯ ಶಿವರಾತ್ರಿಗೆ ಸಜ್ಜಾಗಿದೆ. ಕೊಡಗಿನ 7 ಸಾವಿರ ಸೀಮೆಬೆಟ್ಟ ಸಾಲುಗಳಲ್ಲಿ ಮಾಲಂಬಿಬೆಟ್ಟ ಮೂರನೇ ಅತಿ ಎತ್ತರವಾದ ಬೆಟ್ಟವೆನಿಸಿದೆ. ಕೊಡಗಿನ ಬೆಟ್ಟಗಳ ಸಾಲಿನಲ್ಲಿ ಬರುವ ಈ ಸ್ಥಳ ಐತಿಹಾಸಿಕ ಮಹತ್ವ ಪಡೆದಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಪುಷ್ಪಗಿರಿ ಬೆಟ್ಟವನ್ನು ಬಿಟ್ಟರೆ ಮಾಲಂಬಿ ಬೆಟ್ಟವೇ ಎರಡನೆಯ ಅತಿ ಎತ್ತರದ ಬೆಟ್ಟ. ಹೀಗಾಗಿ ಈ ಬೆಟ್ಟ ಶಿವರಾತ್ರಿಗೆ ಮಾತ್ರವಲ್ಲ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಮಹತ್ವ ಪಡೆದಿದ್ದು, ಚಾರಣಿಗರಿಗೆ ಅತ್ಯಂತ ಪ್ರೀಯವಾಗಿದೆ.

ಬೆಟ್ಟದ ತುದಿಯಲ್ಲಿ ಕಟ್ಟಿರುವ ಮಳೆಮಲ್ಲೇಶ್ವರನ ದೇವಾಲಯ ಬೆಟ್ಟಕ್ಕೆ ಕಿರೀಟವಿಟ್ಟಂತೆ ಕಂಗೊಳಿಸುತ್ತದೆ. ಮಳೆಮಲ್ಲೇಶ್ವರ ದೇವಾಲಯ ಹಳೆಯ ಕಾಲದ್ದು. ಬ್ರಿಟಿಷ್ ಆಡಳಿತ ಕಾಲದಿಂದಲೇ ಅಂದರೆ 1830 ರಿಂದ ಮಾಲಂಬಿ ಬೆಟ್ಟದ ಮೇಲೆ ಮಳೆಮಲ್ಲೇಶ್ವರನಿಗೆ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕೊಡಗನ್ನು ವೀರಶೈವ ದೊರೆಗಳು ಆಳಿದ ಕಾರಣ ಶಿವನ ಆರಾಧನೆಯೇ ಇಲ್ಲಿ ಅಧಿಕವಾಗಿದೆ. ಮಳೆಮಲ್ಲೇಶ್ವರ ಗುಡಿ ಕೂಡ ಇದರಲ್ಲಿ ಒಂದು.

ಹಿಂದೊಮ್ಮೆ ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿಕೊಂಡಾಗ ಹಾಸನ ಜಿಲ್ಲೆಯ ಅರಕಲಗೂಡುವಿನಿಂದ ಶಿವನು ಮಲ್ಲೇಶ್ವರಕ್ಕೆ ಬಂದು ನೆಲೆಸಿದ ಎಂಬದು ಪುರಾಣ ಕಥೆ. ಆಗ ಮಳೆಯಾಗಿದ್ದರಿಂದ ಈ ದೇವರಿಗೆ ‘ಮಳೆಮಲ್ಲೇಶ್ವರ’ ಎಂಬ ಹೆಸರು ಬಂದೀತೆಂಬ ಪ್ರತೀತಿ ಇದೆ. ಹೀಗಾಗಿ ಮಹಾಶಿವರಾತ್ರಿಯಂದು ಇಲ್ಲಿ ವಿವಿಧ ಪೂಜಾ ಕಾರ್ಯಗಳು, ಅನ್ನಸಂತರ್ಪಣೆ ನಡೆಯುತ್ತದೆ. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದಲೂ 15 ಸಾವಿರಕ್ಕೂ ಅಧಿಕ ಭಕ್ತರು ಬಂದು ಮುಂಜಾನೆಯಿಂದಲೇ ಬೆಟ್ಟವೇರುವದು ವಿಶೇಷ. ಬೆಟ್ಟ ಇಳಿದು ಬರುತ್ತಿರುವಂತೆ ತುಂತುರು ಮಳೆ ಸುರಿಯುತ್ತದೆ.

1999ರಲ್ಲಿ ದಾನಿಗಳು ಹಾಗೂ ಕಾಫಿ ಬೆಳೆಗಾರರು ರೂ. 10 ಲಕ್ಷ ವೆಚ್ಚದಲ್ಲಿ ಬೆಟ್ಟದ ತುದಿಯಲ್ಲಿನ ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದರು. 2006ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾಲಂಬಿಯ ಮಳೆಮಲ್ಲೇಶ್ವರ ಬೆಟ್ಟ ಸೇರಿಸಲಾಗಿದೆ. 2012-13ರ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯು ರೂ. 68 ಲಕ್ಷ ವೆಚ್ಚದಲ್ಲಿ ಬೆಟ್ಟ ಅಭಿವೃದ್ಧಿಪಡಿಸಿದೆ. ಮಾಲಂಬಿ ಬೆಟ್ಟದಲ್ಲಿ ಫೆ. 24 ರಂದು (ಇಂದು) ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆಯಲಿವೆ. ಸಾರ್ವಜನಿಕರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಳೆಮಲ್ಲೇಶ್ವರ ದೇವಾಲಯ ಸಮಿತಿ ತಿಳಿಸಿದೆ.