ನಮ್ಮ ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿದ ಸುಕೃತ ಫಲದಿಂದ ಈ ಮಾನವ ಜನ್ಮ ಲಭಿಸಿರುತ್ತದೆ. ಈ ಜನ್ಮವನ್ನು ಪಡೆದ ಬಳಿಕ ತ್ರಿಕರಣಪೂರ್ವಕವಾಗಿ ಸತ್ಕರ್ಮಗಳನ್ನು ಮಾಡುತ್ತಿದ್ದರೆ ಮಾತ್ರ ಈ ಜನ್ಮದ ಸಾರ್ಥಕತೆಯುಂಟಾಗುತ್ತದೆ. ಸುಖ, ಸಂತೋಷ, ಮತ್ತು ನೆಮ್ಮದಿಯುಂಟಾಗಬೇಕೆಂಬುದೇ ಇಂತಹ ಸತ್ಕರ್ಮಗಳನ್ನು ಆಚರಿಸುವದರ ಮೂಲ ಉದ್ದೇಶ. ಧರ್ಮಮಾರ್ಗದಲ್ಲಿ ಮನ್ನಡೆದರೆ ಇವೆಲ್ಲ ಲಭಿಸುತ್ತದೆ. ಧರ್ಮ ಮಾರ್ಗವೆಂದರೆ ಒಳ್ಳೆಯ ಮಾರ್ಗ. ಗುರು-ಹಿರಿಯರಲ್ಲಿ ಅವರ ಮಾತುಗಳಲ್ಲಿ ವಿಶೇಷ ಶ್ರದ್ಧೆ, ಒಳ್ಳೆಯ ಕೆಲಸ, ಕಾರ್ಯಗಳನ್ನು ಮಾಡುವದು, ಧರ್ಮರೀತಿಯ ಸಂಪಾದನೆ, ಭಗವಂತನಲ್ಲಿ ಭಕ್ತಿ, ಸಮರ್ಪಣಾಭಾವದ ಪೂಜೆ, ಜಪ, ತಪ ಆರಾಧನೆಗಳಿಂದ ನಮ್ಮಲ್ಲಿ ದೈವಾನುಗ್ರಹ ಒದಗಿ ಬಂದರೆ ನಮ್ಮ ವ್ಯಕ್ತಿತ್ವವು ಮೇಲ್ಮಟ್ಟಕ್ಕೇರುವದಲ್ಲದೆ ನಮ್ಮ ಆತ್ಮದಲ್ಲಿ ಗುಪ್ತವಾಗಿರುವ ಪರಮಾತ್ಮನ ದಿವ್ಯ ಚೇತನ ಜಾಗೃತವಾಗಿ ನಮ್ಮಲ್ಲಿ ಆಧ್ಯಾತ್ಮಿಕವಾಗಿ ವಿಶೇಷ ಬಲವುಂಟಾಗಿ ಈ ಮನುಷ್ಯ ಜನ್ಮವನ್ನು ಸಾಧನೆಯ ಮಾರ್ಗದತ್ತ ಕೊಂಡ್ಯೊಯ್ಯುತ್ತದೆ. ನಾವೆಲ್ಲ ಜ್ಯೋತಿ ಸ್ವರೂಪ ಆತ್ಮರು. ಎಂದೆಂದಿಗೂ ನಂದದ ನಂದಾದೀಪ. ನಾನೇ ದೇಹ. ಈ ಭಾವನೆಯಿಂದ ಜನನ-ಮರಣ, ವ್ಯಾಧಿ-ಚಿಂತೆಗಳ ಸಂತಾಪದಲ್ಲಿರುವ ಮನುಷ್ಯನಿಗೆ ಆತ್ಮದ ಅರಿವಾದಾಗ ಮರಣವೇ ಮಹಾನವಮಿ ಆಗುತ್ತದೆ. ‘ಜಾತಸ್ಯಹಿಧ್ರ್ರುರ್ವೋಮೃತ್ಯುಂ ಧ್ರುವಂ ಜನ್ಮ ಮೃತಸ್ಯಚ’ ಎಂಬ ಗೀತಾ ವಾಣಿಯಂತೆ ಬದುಕಿನಲ್ಲಿ ಅರ್ಥಪೂರ್ಣವಾಗಿ ಸ್ವಾರ್ಥರಹಿತರಾಗಿ ಬದುಕಬಲ್ಲ ವೀರರು ನಾವಾಗುತ್ತೇವೆ. ದೇಹದಲ್ಲಿದ್ದು ದೇಹಕ್ಕೆ ಅತೀತವಾಗಿ ದೇಹವನ್ನು ನಿಯಂತ್ರಿಸುವ ಜ್ಯೋತಿ ಸ್ವರೂಪ ಆತ್ಮ ಮತ್ತು ಪರಮಾತ್ಮರ ಮಧುರ ಮಿಲನವೇ ಈಶ್ವರಾನುಭೂತಿ.
ವೇದಾಂತವು ಪರಮ ತತ್ವವನ್ನು ‘ಬ್ರಹ್ಮ’ ಎಂದು ಕರೆದಿದೆ. ಅದನ್ನೇ ತಂತ್ರಶಾಸ್ತ್ರದಲ್ಲಿ ‘ಪರಮಶಿವ’ ಎಂದು ಕರೆದಿದ್ದಾರೆ. ಶಿವತತ್ವವು ನಿರ್ವಿಕಾರವಾದದ್ದು ಅಂದರೆ ಬದಲಾವಣೆ ಹೊಂದದೆ ಇರುವಂಥದ್ದು. ಇದರಲ್ಲಿ ಎರಡು ಬಗೆ. ಅಖಂಡವಾಗಿ ಕಂಡು ಬರುವಂಥದ್ದು ‘ನಿಷ್ಕಲಾ’. ಭಾಗಗಳಾಗಿರುವಂತೆ ಕಂಡು ಬರುವಂಥದ್ದು ‘ಸಕಲಾ’ ‘ಸಕಲಾ’ಸ್ಥಿತಿಯೇ ಈ ಜಗತ್ತು. ಅಂದರೆ ಪರಮ ಶಿವನೇ ಭಿನ್ನ ಭಿನ್ನವಾಗಿ ಕಂಡು ಬಂದಾಗ ಅದನ್ನು ಜಗತ್ತು ಎನ್ನುತ್ತೇವೆ. ಆಧುನಿಕ ವಿಜ್ಞಾನ ಎಲ್ಲಾ ಬಗೆಯ ದ್ರವ್ಯದ ಮೂಲ ಸ್ಥಿತಿಗೆ ‘ಶಕ್ತಿಯೇ’ ಕಾರಣವೆಂದು ಹೇಳುತ್ತದೆ. ಇದರ ಅರ್ಥ ಒಂದು ಮೂಲ ಭೌತಿಕ ಶಕ್ತಿಯಿಂದಲೇ ಇಡೀ ಜಗತ್ತು ನಿರ್ಮಾಣ ಗೊಂಡಿದೆಯೆಂದು. ತಂತ್ರಶಾಸ್ತ್ರವು ಇದನ್ನೇ ಹೇಳುತ್ತದೆ. ಈ ಜಗತ್ತು ಹೊರಹೊಮ್ಮುತ್ತಿರುವದು ಮನಸ್ಸು ಮತ್ತು ಭೌತಿಕ ಪದಾರ್ಥಗಳ ಮೂಲಕ ವ್ಯಕ್ತವಾಗುವ ಪರಾಶಕ್ತಿಯಿಂದಲೇ ಎಂದು. ಶಿವ ಮತ್ತು ಶಕ್ತಿ ಬೇರೆಯಲ್ಲ. ಇವೆರಡೂ ಒಂದೇ ಪರತತ್ವದ ಕ್ರಿಯಾರಹಿತ (ಶಿವ) ಮತ್ತು ಕ್ರಿಯಾಸಹಿತ (ಶಕ್ತಿ) ಮುಖಗಳು ಎಂಬುದು ತಂತ್ರಶಾಸ್ತ್ರದ ಅಭಿಮತ. ಶಿವತತ್ವವೇ ಕ್ರಿಯಾ ಸ್ಥಿತಿಯಲ್ಲಿ ಶಕ್ತಿ ಎಂಬ ಹೆಸರು ಪಡೆಯುತ್ತದೆ. ಶಕ್ತಿ ತತ್ವವೇ ಸುಪ್ತಸ್ಥಿತಿಯಲ್ಲಿ ‘ಶಿವ’ನೆಂಬ ಹೆಸರು ಪಡೆಯುತ್ತದೆ. ತಂತ್ರಶಾಸ್ತ್ರದ ಪ್ರಕಾರ ಈ ಜಗತ್ತು ವಿಕಸನಗೊಂಡಿರುವುದು ಪರಿಪೂರ್ಣ ಮತ್ತು ಪರಿಶುದ್ಧ ಶಿವ-ಶಕ್ತಿ ಸ್ಥಿತಿಯಿಂದ. ಆದ್ದರಿಂದಲೇ ಈ ಜಗತ್ತು ಈಶ್ವರಾನುಭೂತಿಯಿಂದ ಕೂಡಿರುವಂಥದ್ದು. ಈಶ್ವರ ಎಂದರೆ ಜಗತ್ತಿನ ಒಡೆಯ. ಈ ಈಶ್ವರಾನೂಭೂತಿಯೇ ಭಕ್ತನ ಭಾವನೆಯಲ್ಲಿ ‘ಭಗವತ್ ಸ್ವರೂಪ’ವಾಗಿ ಹೊರಹೊಮ್ಮತ್ತದೆ. ಆ ಮಂಗಲಕರ ಸ್ವರೂಪವೇ ಶಿವ ಮತ್ತು ಶಕ್ತಿ. ಭಗವಂತನಿಗೆ ಯಾವುದೇ ಆಕಾರವಿಲ್ಲ. ನಿರಾಕಾರಿಯಾಗಿ ಸರ್ವವ್ಯಾಪಕ ನಾಗಿರುವ ಅವನನ್ನು ನಮಗಿಷ್ಟವಾದ ರೂಪಗಳಿಂದ, ಆಕೃತಿಗಳಿಂದ ಪೂಜಿಸಿ, ಜಪಿಸಿ, ಧನ್ಯತೆಯನ್ನು ಪಡೆಯುವ sಸ್ವಾತಂತ್ರ್ಯ ಎಲ್ಲರಿಗೂ ಇದೆ. ಭಗವಂತನು ನಮ್ಮ ಇಂದ್ರಿಯಗಳಿಗೆ ಕಾಣುವುದಿಲ್ಲ. ಕೇವಲ ಹೃದಯ, ಮನಸ್ಸು ಮತ್ತು ಬುದ್ಧಿಗಳಿಂದ ಆತನನ್ನು ಅನುಭವಿಸು ಎಂದು ಉಪನಿಷತ್ತು ಹೇಳುತ್ತದೆ. ಒಂದು ದೈವೀಕರ್ಮವು ‘ಯಜ್ಞ’ವೆನಿಸಬೇಕಾದರೆ ಅದನ್ನು ಕಾಯೇನ, ವಾಚಾ, ಮನಸಾ, ಶ್ರದ್ಧಾ ಭಕ್ತಿಗಳಿಂದ ಸಮರ್ಪಣಭಾವದೊಂದಿಗೆ ಮಾಡಬೇಕು. ನಮ್ಮವರು ಸ್ತ್ರೀಯನ್ನು ದೇಹ-ಪ್ರಕೃತಿಗೂ, ಆತ್ಮನನ್ನು ಪುರುಷ ಎಂದೂ ತಿಳಿಯಲಾಗುವಂತೆ ಮಾಡಿ, ದೇಹ-ಆತ್ಮಗಳ ಸಂಬಂಧವನ್ನೇ ಶಿವ-ಶಕ್ತಿ (ಪಾರ್ವತಿ) ಎಂದು ಕಲ್ಪಿಸಿದ್ದಾರೆ. ಶಕ್ತಿ ಸಮೇತನಾದ ಶಿವ ಸರ್ವ ಸಮರ್ಥ. ಜಗದ ಮಾತಾ-ಪಿತರಾಗಿರುವ ಶಿವ-ಪಾರ್ವತಿಯರ ವಿಶೇಷ ಆರಾಧನೆಯ ದಿನವೇ ‘ಶಿವರಾತ್ರಿ’. ಮನುಷ್ಯನ ಜೀವನವೇ ಒಂದು ರಾತ್ರಿ ಕಾಲ ರಾತ್ರ್ರಿಯಾಚೆಗಿನ ಅಮೃತದ ಬೆಳಕಿನಲ್ಲಿ ಜ್ಞಾನ ಸೂರ್ಯ ಶಿವನ ಮೊದಲ ಕಿರಣ ಸ್ಪರ್ಶಿಸುವ ಸುಖರಾತ್ರಿಯೇ ‘ಶಿವರಾತ್ರಿ’
ಇದೇ ಶಿವಯೋಗ ! ಯೋಗವೆಂದರೆ ಆತ್ಮ-ಪರಮಾತ್ಮರ ಮಧುರ ಮಿಲನಂ ಈ ಜಗವೇ ಶಿವನ ಲೀಲಾರಂಗ. ಈಶ್ವರ ಕೃಪೆಯಿಂದಲೇ ಆಯಸ್ಸು, ಆರೋಗ್ಯ, ಐಶ್ವರ್ಯ, ಸುಖ-ಸಂಪತ್ತು ಲಭಿಸುತ್ತದೆ ಎಂಬದಾಗಿ ‘ಶ್ರೀ ಶಿವ ರಹಸ್ಯ’ದಲ್ಲಿ ತಿಳಿಸಲಾಗಿದೆ.
ಪುರಾಣಗಳು ಹೇಳಿರುವಂತೆ ಶಿವ-ಶಕ್ತಿಯರ ಹಲವು ಸನ್ನಿವೇಶಗಳನ್ನು ಜೋಡಿಸಿ ಅದಕ್ಕೆ ವಿಶೇಷತೆ ನೀಡಿ ಆ ದಿವಸವನ್ನು ಪರ್ವವನ್ನಾಗಿ ಆಚರಿಸುತ್ತಾ ಬಂದಿರುತ್ತಾರೆ. ಅದೇ ಮಹಾ ಶಿವರಾತ್ರಿ ಅಂದು ಶಿವ-ಪಾರ್ವತಿಯರ ವಿವಾಹದಿನ, ಶಿವತಾಂಡವ ಆಡಿದ ರಮ್ಯ ದಿನ, ಸಮುದ್ರ ಮಥನ ಕಾಲದಲ್ಲಿ ಲೋಕ ಕಲ್ಯಾಣಾರ್ಥ ಉತ್ಪತ್ತಿಯಾದ ಭಯಂಕರ ವಿಷ ಹಾಲಾಹಲವನ್ನು ತನ್ನ ಬೊಗಸೆಯಲ್ಲಿ ತುಂಬಿ ಕುಡಿದು ಗಂಟಲಿನಲ್ಲಿ ತಡೆದು ‘ನೀಲಕಂಠ’ನೆನಿಸಿದ ಪರ್ವದಿನ. ಕೋಟಿ ಸೂರ್ಯ ಪ್ರಕಾಶಮಾನವಾದ ಶಿವನು ಜ್ಯೋತಿರ್ಲಿಂಗ ರೂಪದಲ್ಲಿ ಉದ್ಭವಿಸಿದ ಅನುಪಮ ದಿನ ಇತ್ಯಾದಿ ಪ್ರತೀತಿಗಳು ಪುರಾಣಗಳಲ್ಲಿವೆ. ಶಂಕೆ, ಶೋಕ, ಶೂಲೆಗಳಿಂದ ಶವಗೊಂಡ ಮಾನವನ ಬದುಕಿನಲ್ಲಿ ಜೀವನ ಶೃಂಗಾರವನ್ನು ತುಂಬುವ ಹರ್ಷದ ಹಬ್ಬವೇ ಈ ‘ಮಹಾಶಿವರಾತ್ರಿ’
ಕಾಲದ ವಿವಿಧ ಸ್ತರಗಳಲ್ಲಿ ಬೆಳೆದು ನಿಂತ ಶಿವನ ವ್ಯಕ್ತಿತ್ವ ಕುತೂಹಲ ಕೆರಳಿಸುವಂತಹುದು. ವೇದ ಪೂರ್ವದ ಆದಿಯ ಸಂಸ್ಕøತಿಯಲ್ಲೂ ಶಿವನ ಪರಿಕಲ್ಪನೆ ಇತ್ತು. ಸಮಸ್ತ ದೇವತೆಗಳೂ, ಸಕಲರಿಗೂ ಉಪಾಸ್ಯ ಮೂರ್ತಿಯಾದುದರಿಂದ ಶಿವನಿಗೆ ದೇವರ ದೇವ’ ಮಹಾದೇವ’ನೆಂಬ ಗುಣಗೌರವ. ಸಹಸ್ರ ಸಹಸ್ರ ಹೆಸರುಗಳನ್ನು ಪಡೆದ ಶಿವನ ಒಂದೊಂದು ಹೆಸರು ಅರ್ಥಪೂರ್ಣ. ಜಗದ ಈಶನಾದ ಈತ ಮಹತ್ತರವಾದ ಈಶ್ವರತ್ವ (ಜಗದೀಶ) ವುಳ್ಳವನು. ತ್ರಿಮೂರ್ತಿಗಳಲ್ಲಿ ಒಬ್ಬ ಇಚ್ಛಾ, ಜ್ಞಾನ, ಕ್ರಿಯಾ ಶಕ್ತಿಗಳನ್ನೂ ಅನುಗ್ರಹಿಸುವ ತ್ರ್ಯಂಬಕನು. ಭಕ್ತರಿಗೆ ಶುಭವನ್ನುಂಟು ಮಾಡುವುದರಿಂದ ಶಂಕರನು. ಪಂಚಭೂತಗಳಿಂದ ಕೂಡಿರುವಂಥ ಭಗವಾನ್ ಶಿವನ ಪಂಚಮುಖಗಳು ಈಶಾನ, ತತ್ಪುರುಷ, ಅಘೋರ, ವಾಮದೇವ ಮತ್ತು ಸದ್ಯೋಜಾತ. ಶಿವನ ಬಾಹ್ಯ ಸ್ವರೂಪ ಅನೇಕ ಆಧ್ಯಾತ್ಮಿಕ ಭೌಮ ವಿಚಾರಗಳ ಸಂಕೇತ. ಪೂರ್ವಾಭಿಮುಖವಾಗಿರುವ ತತ್ವರುಷ ಮುಖವು ‘ಗಾಳಿಯ’ ಮೇಲೆ ನಿಯಂತ್ರಣ, ಇದು ಅಂಧಕಾರ ಮತ್ತು ಅಜ್ಞಾನದ ತತ್ವವನ್ನು ಪ್ರತಿನಿಧಿಸುತ್ತದೆ. ಉತ್ತರಾಭಿಮುಖವಾಗಿರುವ ಅಘೋರ ವದನವು ‘ಅಗ್ನಿ’ಯ ಮೇಲಿನ ಅಧಿಕಾರ. ಇದು ವಿಶ್ವದ ಸ್ತ್ರೀ, ಕಾರ್ಯ ಮತ್ತು ಸಂಸ್ಕಾರ ಶಕ್ತಿಯ ಪ್ರತಿನಿಧಿಯಾಗುತ್ತದೆ. ದಕ್ಷಿಣಾಭಿಮುಖವಾಗಿರುವ ವಾಮದೇವ ‘ಜಲ’ದ ಮೇಲಿನ ಶಕ್ತಿ. ಆಮೂಲಕ ಸಂರಕ್ಷಣಾ ಗುಣವನ್ನು ಪ್ರತಿಪಾದಿಸುತ್ತದೆ, ಇದು ಸೃಷ್ಟಿ ಶಕ್ತಿಯ ಸಂಕೇತ. ಪಶ್ಚಿಮಾಭಿಮುಖವಾಗಿರುವ ಸದ್ಯೋಜಾತ ಭೂಮಿಯ ಮೇಲಿನ ಅಧಿಕಾರವನ್ನು ನಿರೂಪಿಸುತ್ತದೆ. ಕ್ಷಿತಿಜದತ್ತ ಮುಖ ಮಾಡುವ ಈಶಾನ ವದನಾರವಿಂದವು ಸದಾಶಿವ, ಆಕಾಶ, ಮೋಕ್ಷ, ನೀಡುವ ಸ್ವರೂಪವಾಗಿದೆ. ಸೃಷ್ಟಿ, ಸ್ಥಿತಿ, ಲಯಗಳ ಚರಾಚರ ಜಗತ್ತಿನ ಪ್ರಮುಖ ಆಯಾಮಗಳು. ‘ಲಯ’ವೆಂದರೆ ನಾಶವೆಂದು ಅರ್ಥವಲ್ಲ. ‘ಲಯ’ವೆಂದರೆ ಪರಿವರ್ತನೆ. ಇದು ವಿಕಾಸದ ರಹಸ್ಯವೂ, ರೀತಿಯೂ ಕೂಡ. ಚಂದ್ರ ಮನಸ್ಸಿನ ಅಧಿದೇವತೆ, ಸೂರ್ಯ ಬುದ್ಧಿಯ ಅಧಿದೇವತೆ, ಇವರಿಬ್ಬರ ಚಲನೆಯಿಂದ ವಿವಿಧ ತಿಥಿಗಳ ಉತ್ಪತ್ತಿ. ಹುಣ್ಣಿಮೆಯೆಂದು ಚಂದ್ರನು ಸೂರ್ಯನಿಂದ ಅತ್ಯಂತ ದೂರವಿದ್ದು ತನ್ನ ಎಲ್ಲಾ ಷೋಡಶ ಕಲೆಗಳಿಂದ ಕೂಡಿರುತ್ತಾನೆ. ಕೃಷ್ಣ ಪಕ್ಷದಲ್ಲಿ ಕ್ರಮೇಣ ರವಿಯ ಸಮೀಪಕ್ಕೆ ಬಂದಂತೆ ಒಂದೊಂದೆ ಕಲೆಗಳನ್ನು ಕಳೆದುಕೊಳ್ಳುತ್ತಾ ಚತುದರ್ಶಿಯ ದಿನ ಕಲಾಶೇಷನಾಗುತ್ತಾನೆ. ಎಂದರೆ ಆ ದಿನ ಚಂದ್ರನ ಒಂದೇ ಕಲೆ ಉಳಿದಿರುತ್ತದೆ. ಮರುದಿನ ಅಮಾವಾಸ್ಯೆ. ಸೂರ್ಯ-ಚಂದ್ರರ ಸಂಗಮ ದಿನ. ಅಂದು ಚಂದ್ರನು ತನ್ನತನವನ್ನು ಪೂರ್ಣವಾಗಿ ಕಳೆದುಕೊಂಡು ಸೂರ್ಯನೊಡನೆ. ಬೆರೆಯುತ್ತಾನೆ. ಜ್ಞಾನ ಪರಿಪೂರ್ಣ ವಾಗಬೇಕಾದರೆ ಮನಸ್ಸು ಬುದ್ಧಿಯಲ್ಲಿ ಲಯವಾಗಬೇಕು. ಇದನ್ನೇ ಶಿವರಾತ್ರಿಯ ತತ್ವ ತಿಳಿಸುತ್ತದೆ. ಜ್ಞಾನದೇವತೆ ಶಿವನ ಆರಾಧನೆಗೆ ಉತ್ಕøಷ್ಟವಾದ ಪರ್ವಕಾಲ ‘ಮಹಾಶಿವರಾತ್ರಿ’ ಆ ದಿನ ರಾತ್ರಿ ಒಂದು ಕಲೆ ಮಾತ್ರ ಉಳಿದಿರುವ ಚಂದ್ರನನ್ನು ಧರಿಸಿರುವ ಶಿವನನ್ನು ಪೂಜಿಸಿ, ಜಾಗರಣೆ, ಶಾಸ್ತ್ರ, ಶ್ರವಣಾದಿಗಳ ಮೂಲಕ ಮನೋಲಯಕ್ಕಾಗಿ ‘ಚಂದ್ರಶೇಖರನನ್ನು ಒಲಿಸಿಕೊಳ್ಳಬೇಕು. ಶಿವನೊಲುಮೆಯಿಂದ ಮನೋಲಯಗೊಳಿಸಿಕೊಂಡು ಪೂರ್ಣಜ್ಞಾನ ಸಂಪಾದಿಸಬೇಕು. ಇಂತಹ ಜ್ಞಾನದಿಂದ ಜೀವನದ ಪರಮ ಲಕ್ಷ್ಯವಾದ ಮೋಕ್ಷ ಸಿದ್ಧಿಸುತ್ತದೆ. ಶಿವನನ್ನು ಆರಾಧಿಸುವ ವಿಧಾನ ಹೀಗಿದೆ.
‘‘ಆತ್ಮಾತ್ವಂ ಗಿರಿಜಾ ಮತಿಃ ಸಹಚರಾತ್ ಪ್ರಾಣಾ: ಶರೀರಂ ಗೃಹಂ!
ಪೂಜಾ ತೇ ವಿಷಯೋಪಭೋಗ ರಚನಾ, ನಿದ್ರಾ ಸಮಾಧಿಃ ಸ್ಥಿತಿ : ||
ಸಂಚಾರಃ ಪದಯೋ : ಪ್ರದಕ್ಷಿಣ ವಿಧಿ : ಸ್ತೋತ್ರಾಣಿ ಸರ್ವಾಧಿರೋಃ ||
‘ಯದ್ಯತ್ಕರ್ಮ ಕರೋಮಿ ತತ್ತ ದಖಿಲಂ ಶಂಭೋತವಾರಾಧನಂ ||
ಅರ್ಥಾತ್-ನನ್ನ ಆತ್ಮವೇ ನೀನು, ಬುದ್ಧಿಯೇ ಗಿರಿಜೆ, ಪ್ರಾಣಗಳೇ ಸಹಚರರು, ಶರೀರವೇ ದೇವಾಲಯ, ವಿಷಯಾದಿ ಸುಖಗಳ ಉಪಭೋಗವೇ ನಿನ್ನ ಪೂಜೆ, ನಿದ್ರೆಯೇ ಸಮಾಧಿ ಸ್ಥಿತಿ, ಕಾಲು ಸಂಚರಿಸಿದ್ದೆಲ್ಲಾ ನಿನಗೆ ಪ್ರದಕ್ಷಿಣೆ, ಬಾಯಿಯಿಂದ ಹೊರಬಿದ್ದ ಮಾತುಗಳೆಲ್ಲ ನಿನ್ನ ಸ್ತೋತ್ರಗಳು. ಶಂಭುವೇ ನಾನು ಏನೇನು ಕೆಲಸ ಮಾಡುತ್ತೇನೋ ಅದೆಲ್ಲವೂ ನಿನ್ನ ಆರಾಧನೆ. ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲ ಬಿಡದ ಸಾಧನೆಯ ಧೋತಕ. ಧ್ಯಾನ ಪ್ರಿಯ ಶಿವ ಭಕ್ತರಿಂದ ಬಯಸುವುದು ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ಎಲ್ಲಾ ಆಡಂಬರಗಳಿಂದ ಮುಕ್ತರಾಗಿ ಸರಳ ಮನಸ್ಸಿನಿಂದ ಪರಶಿವನನ್ನು ನೆನೆದು, ಭಜಿಸಿ ಮಹಾ ಶಿವರಾತ್ರಿಯನ್ನು ಆಚರಿಸೋಣ, ಲೋಕಕ್ಕೆ ಸುಭೀಕ್ಷೆಯಾಗಲಿ ಎಂಬ ಹಾರೈಕೆಯೊಂದಿಗೆ ಒಂದು ಬಿಲ್ವದಳ ಶಿವಪಾದಕ್ಕೆ.
?ಮುಕ್ಕಾಟಿರ ದಿವ್ಯ ಕಾರ್ಯಪ್ಪ, ಪೊನ್ನಂಪೇಟೆ.