ಮಡಿಕೇರಿ, ಫೆ. 25: ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಹಾಗೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸಾರ್ವಜನಿಕವಾಗಿ ಘೋಷಿಸ ಬೇಕೆಂದು ಒತ್ತಾಯಿಸಿ ತಾ. 28 ರಂದು ಮಡಿಕೇರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸಲು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಮೋಹನ್ ಮೂಗನಾಡು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜು ಅವರು ನೀಡಿದ ವರದಿಯನ್ನು ತಕ್ಷಣ ಘೋಷಣೆ ಮಾಡಬೇಕು ಮತ್ತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಘೋಷಿಸಬೇಕೆಂದು ಒತ್ತಾಯಿಸಿ ರಾಜ್ಯವ್ಯಾಪಿ ಪ್ರತಿಭಟನೆ ಯನ್ನು ನಡೆಸಲಾಗುತ್ತದೆ ಎಂದರು.

ಒಳಮೀಸಲಾತಿಗಾಗಿ ರಾಜ್ಯದ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಸಂವಿಧಾನದ ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು. ರಾಜ್ಯದ ಸುಮಾರು 6 ಕೋಟಿ ಜನಸಂಖ್ಯೆಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಈಗಾಗಲೆ ನಡೆಸಲಾಗಿದ್ದು, ತಕ್ಷಣ ಇದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಮೋಹನ್ ಮೂಗನಾಡು, ಮಡಿಕೇರಿ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರಾಜಪೆÉೀಟೆ ಸಂಚಾಲಕ ಹೆಚ್.ಎಂ. ಮಹದೇವು, ಜಿಲ್ಲಾ ಖಜಾಂಚಿ ಗಿರೀಶ್ ಪಗಡಿಗತ್ತಲ ಹಾಗೂ ಪ್ರಮುಖರಾದ ಗಾಯತ್ರಿ ನರಸಿಂಹ ಉಪಸ್ಥಿತರಿದ್ದರು.