ಸೋಮವಾರಪೇಟೆ, ಫೆ. 25: ಪ್ರಸಕ್ತ ಸಾಲಿನಲ್ಲಿ ಆವರಿಸಿದ ಬರ ಪರಿಸ್ಥಿತಿಯಿಂದಾಗಿ ಸೋಮವಾರ ಪೇಟೆ ತಾಲೂಕಿನಲ್ಲಿ ರೂ. 1.49ಕೋಟಿ ಕೃಷಿ ಫಸಲು ನಷ್ಟ ಸಂಭವಿಸಿದ್ದು, ಈ ಬಗ್ಗೆ ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಹೇಳಿದರು.
ಇಲ್ಲಿನ ಕೃಷಿ ಇಲಾಖಾ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಎದುರಾದ ಬರದಿಂದ ಕೃಷಿ ಇಳುವರಿ ಕುಂಠಿತಗೊಂಡಿದ್ದು, ತಾಲೂಕಿನ 1477 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗಿದ್ದ ಭತ್ತ ಕೃಷಿಯಲ್ಲಿ ಶೇ.33ಕ್ಕೂ ಹೆಚ್ಚು ನಷ್ಟವಾಗಿದೆ. ಒಟ್ಟಾರೆ ತಾಲೂಕಿನಾದ್ಯಂತ 1.49 ಕೋಟಿಯಷ್ಟು ಕೃಷಿ ನಷ್ಟವಾಗಿದ್ದು, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದರು.
ಬರದಿಂದ ಕೃಷಿ ನಷ್ಟಗೊಂಡಿರುವ ರೈತರ ಸಂಪೂರ್ಣ ವಿವರವನ್ನು ಪಡೆಯಲಾಗಿದೆ. ರೈತರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಐಎಫ್‍ಎಸ್‍ಸಿ ಸಂಖ್ಯೆ ಸಹಿತ ವರದಿ ಸಲ್ಲಿಸಲಾಗಿದ್ದು, ಸರ್ಕಾರದಿಂದ ಪರಿಹಾರಧನ ಬಿಡುಗಡೆಗೊಂಡರೆ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ ಎಂದು ರಾಜಶೇಖರ್ ತಿಳಿಸಿದರು.
ರೈತರು ವೈಜ್ಞಾನಿಕವಾಗಿ ಕೃಷಿ ಕಾರ್ಯ ಕೈಗೊಂಡರೆ ನಷ್ಟದಿಂದ ಪಾರಾಗಬಹುದಾಗಿದೆ. ಮಣ್ಣಿನ ಸತ್ವವನ್ನು ಕಾಪಾಡಿಕೊಳ್ಳಲು ಮಣ್ಣು ಪರೀಕ್ಷೆ ಅಗತ್ಯ. ಈ ಮೂಲಕ ಮಣ್ಣಿಗೆ ಬೇಕಾದ ಲಘು ಪೋಷಕಾಂಶಗಳನ್ನು ಒದಗಿಸಬಹುದು. ತಾಲೂಕಿನಲ್ಲಿ ಪ್ರಸಕ್ತ ವರ್ಷ 500ಕ್ಕೂ ಅಧಿಕ ಫಲಾನುಭವಿಗಳಿಗೆ ಪಂಪ್‍ಸೆಟ್ ವಿತರಿಸಲಾಗಿದ್ದು, ಮುಂದೆಯೂ ವಿತರಿಸಲಾಗುವದು ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿ, ತಾಲೂಕಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕೃಷಿಕ ಸಮಾಜದ ಸಭೆಗಳಿಗೆ ಇಲಾಖಾಧಿಕಾರಿಗಳು ನಿರಂತರ ಗೈರಾಗುತ್ತಿದ್ದು, ಸಮಾಜವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮುಕುಂದ, ಕೃಷಿಕ ಸಮಾಜದ ಉಪಾಧ್ಯಕ್ಷ ಗೋವಿಂದರಾಜು, ಸದಸ್ಯರುಗಳಾದ ಪೂಣಚ್ಚ, ಜೋಯಪ್ಪ, ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.