ಮಡಿಕೇರಿ, ಫೆ. 25: ಹದಿನಾಲ್ಕು ವರುಷ ವನವಾಸದಿಂದ ಸೀತೆ ಮರಳಿ ಬಂದಂತೆ ಹದಿನಾರು ವರುಷಗಳ ನಿರಂತರ ಪ್ರಯತ್ನದ ಫಲವಾಗಿ ಇದೀಗ ಮಡಿಕೇರಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಭಾಗ್ಯ ಕೂಡಿಬಂದಿದೆ. ಎಲ್ಲ ರೀತಿಯ ಏಳು-ಬೀಳುಗಳನ್ನು ದಾಟಿ, ಅಡೆ-ತಡೆಗಳನ್ನು ತೊಡೆದು ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿಗಳ ಅಂಕಿತದೊಂದಿಗೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಉದ್ದೇಶಿತ ಜಾಗದಲ್ಲಿ ನೆಲಸಮಗೊಳಿಸುವ ಕಾರ್ಯ ಮುಕ್ತಾಯಗೊಂಡಿದ್ದು, ತಾ. 26 ರಿಂದ (ಇಂದಿನಿಂದ) ಕೆಲಸ ಪ್ರಾರಂಭವಾಗಲಿದೆ. ಕೊನೆಗೂ ಕಿಷ್ಕಿಂಧೆಯಾಗಿರುವ ಬಸ್ ನಿಲ್ದಾಣಕ್ಕೆ ಮುಕ್ತಿ ಸಿಗಲಿದ್ದು, ವರುಷದೊಳಗೆ ಸುಸಜ್ಜಿತ ‘ಹೈಟೆಕ್’ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳು ಕಾರ್ಯಭಾರ ಮಾಡಲಿವೆ.ಜನ-ವಾಹನ ದಟ್ಟಣೆಗನುಗುಣವಾಗಿ ಕಿಷ್ಕಿಂಧೆಯಾಗಿರುವ, ಅಪಾಯಕಾರಿಯಾಗಿಯೂ ಪರಿಣಮಿಸುತ್ತಿರುವ ಖಾಸಗಿ ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂಬ ಕೂಗು ವರ್ಷಗಳ ಹಿಂದಿನದ್ದು 2001ರಿಂದಲೇ ಆಗಿನ ಪುರಸಭಾ ಅಧ್ಯಕ್ಷರಾಗಿದ್ದ ಕಾವೇರಮ್ಮ ಸೋಮಣ್ಣ ಅವರ ಅಧಿಕಾರಾವಧಿಯಿಂದಲೇ ಈ ವಿಚಾರ ಪ್ರಸ್ತಾಪದಲ್ಲಿದೆ. ತದನಂತರ ನಗರಸಭೆಯಾಗಿ ಮಾರ್ಪಾಡಾದ ಮೇಲೂ ಕೂಡ ಅಧ್ಯಕ್ಷರಾಗಿದ್ದ ಕಾವೇರಮ್ಮ ಸೋಮಣ್ಣ, ಪಿ.ಡಿ. ಪೊನ್ನಪ್ಪ, ಹೆಚ್.ಎಂ. ನಂದಕುಮಾರ್, ಜುಲೇಕಾಬಿ ಶ್ರೀಮತಿ ಬಂಗೇರ ಅವರುಗಳ ಆಡಳಿತಾವಧಿಯಲ್ಲೂ ಪ್ರತಿ ಹಂತದಲ್ಲೂ ಬಸ್ ನಿಲ್ದಾಣದ್ದೇ ಚರ್ಚೆ, ನಿರ್ಣಯಗಳೂ ಕೂಡ; ಆದರೇ ಸೂಕ್ತ ಜಾಗ ಸಿಕ್ಕಿರಲಿಲ್ಲ.

ಪಿ.ಡಿ. ಪೊನ್ನಪ್ಪ ಅವರು ಅಧ್ಯಕ್ಷರಾಗಿದ್ದಾಗ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳ ಪ್ರಯತ್ನದ ಫಲವಾಗಿ ವೆಬ್ಸ್ ಬಳಿಯ ಕೃಷಿ ವಿ.ವಿ.ಗೆ ಸೇರಿದ 3 ಎಕರೆಯನ್ನು ಮಂಜೂರು ಮಾಡಿಸುವಲ್ಲಿ ಸಫಲತೆ ಕಂಡಿತು. ತದನಂತರದಲ್ಲಿ, ರೂ. 5 ಕೋಟಿ ಅನುದಾನ ಕೂಡ ಮಂಜೂರಾಯಿತು. ತಡೆಯಾಜ್ಞೆ, ಅಡ್ಡಿ-ಆತಂಕ, ಅನುದಾನದ ಕೊರತೆಯ ನಡುವೆ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ಕಾವೇರಮ್ಮ ಸೋಮಣ್ಣ ಅವರು ಎರಡನೇ ಬಾರಿಗೆ ಅಧ್ಯಕ್ಷರಾದ ಬಳಿಕ ಯೋಜನೆಗೆ ಚಾಲನೆ ದೊರೆತಿದ್ದು, ಉಸ್ತುವಾರಿ ಸಚಿವರ ಪ್ರಯತ್ನದಿಂದಾಗಿ ರೂ. 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಇ-ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೆಲಸ ಪ್ರಾರಂಭವಾಗಿದೆ.

(ಮೊದಲ ಪುಟದಿಂದ)

ರೂ. 4.99 ಕೋಟಿಗೆ ಟೆಂಡರ್

ಕಾಮಗಾರಿಗೆ ಆನ್‍ಲೈನ್ ಮೂಲಕ ಟೆಂಡರ್ ಆಹ್ವಾನಿಸಲಾಗಿ ಒಟ್ಟು 5 ಮಂದಿ ಟೆಂಡರಿನಲ್ಲಿ ಭಾಗವಹಿಸಿದ್ದರು. ಈ ಪೈಕಿ ಮೈಸೂರಿನ ಗುತ್ತಿಗೆದಾರ ನಾಗರಾಜು ಎಂಬವರು ರೂ. 4.99 ಕೋಟಿ ಮೊತ್ತಕ್ಕೆ ಟೆಂಡರ್ ಸಲ್ಲಿಸಿದ್ದು, ರೂ. 5 ಕೋಟಿ ಒಳಗಿನ ಮೊತ್ತವಾದ್ದರಿಂದ ಜಿಲ್ಲಾಧಿಕಾರಿಗಳೇ ಅನುಮತಿ ನೀಡಿದ್ದಾರೆ. ಹೆಚ್ಚಿಗೆ ಮೊತ್ತವಾಗಿದ್ದಲ್ಲಿ ಸರಕಾರದಿಂದ ಅನುಮತಿ ಪಡೆಯಬೇಕಾಗಿತ್ತು. ಇದೊಂದು ರೀತಿಯಲ್ಲಿ ಅನುಕೂಲಕರವಾಗಿದೆ ಎಂದು ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿದರು.

1.5 ಎಕರೆಯಲ್ಲಿ ನಿಲ್ದಾಣ

ಬಸ್ ನಿಲ್ದಾಣಕ್ಕೆಂದು ಮೂರು ಎಕರೆ ಜಾಗ ಮಂಜೂರಾಗಿದ್ದರೂ, ಪ್ರಥಮ ಹಂತದಲ್ಲಿ 1.5 ಎಕರೆ ಜಾಗದಲ್ಲಿ ಬಸ್ ನಿಲ್ದಾಣ ತಲೆ ಎತ್ತಲಿದೆ. ಮಧ್ಯ ಭಾಗದಲ್ಲಿ ತಂಗುದಾಣವಿರಲಿದ್ದು, ಎರಡೂ ಬದಿಗಳಲ್ಲಿ ತಲಾ 9 ರಂತೆ ಒಟ್ಟು 18 ಬಸ್‍ಗಳು ಏಕಕಾಲದಲ್ಲಿ ನಿಲುಗಡೆಗೊಳ್ಳಲು ಅವಕಾಶವಿರುತ್ತದೆ. ನಡುಭಾಗದಲ್ಲಿ ಹೊಟೇಲ್ ಸೇರಿದಂತೆ ಒಟ್ಟು 6 ಮಳಿಗೆಗಳಿರುತ್ತವೆ. ಅನತಿ ದೂರದಲ್ಲಿ ಶೌಚಾಲಯವಿರುತ್ತದೆ. ಮೊದಲ ಅಂತಸ್ತಿನಲ್ಲಿ 6 ಅಂಗಡಿ ಮಳಿಗೆಗಳಿರುತ್ತದೆ. ಎರಡೂ ಬದಿಯಿಂದಲೂ ಮೆಟ್ಟ್ಟಿಲುಗಳ ವ್ಯವಸ್ಥೆಯಿರುತ್ತವೆ. ಹೊರಾವರಣದಲ್ಲಿ ರಸ್ತೆ ಬದಿಗಳಿಗೆ ಹೊಂದಿಕೊಂಡಂತೆ ಎರಡು ಬದಿಗಳಲ್ಲಿ ಆವರಣಗೋಡೆ ನಿರ್ಮಿಸಲಾಗುವದು. ಸುತ್ತಲೂ ಚರಂಡಿ ವ್ಯವಸ್ಥೆ ಇರುತ್ತದೆ. ಯಾವದೇ ದಟ್ಟಣೆ ಏರ್ಪಡದಂತೆ ಒಂದು ಬದಿಯಿಂದ ಬಸ್‍ಗಳಿಗೆ ಒಳ ಪ್ರವೇಶ ಹಾಗೂ ಮತ್ತೊಂದು ಬದಿಯಿಂದ ಹೊರ ತೆರಳಲು ಮಾರ್ಗಗಳಿರುತ್ತದೆ ಎಂದು ನಗರಸಭಾ ಅಭಿಯಂತರ ಅರುಣ್ ಮಾಹಿತಿ ನೀಡಿದರು.

ಬೆಂಗಳೂರಿನ ಬಸಂತ್ ಕನ್ಸಲ್‍ಟೆಂನ್ಸಿ ಸಂಸ್ಥೆಯವರು ನಕಾಶೆ ತಯಾರಿಸಿಕೊಟ್ಟಿರುವದಾಗಿ ತಿಳಿಸಿದ ಅವರು, ಮೈಸೂರಿನ ನಾಗರಾಜು ಗುತ್ತಿಗೆ ಪಡೆದೊಕೊಂಡಿದ್ದಾರೆಂದು ತಿಳಿಸಿದರು.

ಇಂದಿನಿಂದ ಕೆಲಸ

ಈಗಾಗಲೇ ಸ್ಥಳದಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಸಮತಟ್ಟು ಮಾಡಲಾಗಿದೆ. ತಾ. 26ರಂದು (ಇಂದು) ನಕಾಶೆಯಂತೆ ಗುರುತು ಮಾಡುವ ಕೆಲಸ ಆರಂಭಿಸಲಿದ್ದು, ಮರು ದಿನದಿಂದ ಕಾಮಗಾರಿ ಆರಂಭಿಸಲಾಗುವದೆಂದು ಅಭಿಯಂತರ ಅರುಣ್ ತಿಳಿಸಿದರು. ಈ ಕಾಮಗಾರಿಗೆ ನಗರ ಭೂ ಸಾರಿಗೆ ಇಲಾಖೆಯಿಂದ ಶೇ. 75ರಂತೆ 3.75 ಕೋಟಿ ಹಾಗೂ ನಗರಸಭೆ ಎಂಟರ್‍ಪ್ರೈಸಸ್ ಫಂಡ್‍ನಿಂದ ರೂ. 1.24ರಂತೆ ಒಟ್ಟು 4.99 ಕೋಟಿ ಅನುದಾನ ಮಂಜೂರಾಗಿರುವದಾಗಿ ಅವರು ಮಾಹಿತಿ ನೀಡಿದರು.

ಪರ-ವಿರೋಧಗಳ ನಡುವೆಯೂ ಬಸ್ ನಿಲ್ದಾಣಕ್ಕೆ ಚಾಲನೆ ದೊರೆತಿರುವದು ಜನತೆಯ ಬಹುಕಾಲದ ಕನಸು ಈಡೇರಿದಂತಾಗಿದೆ ಎಂದು ಹೇಳಬಹುದು.