ಶನಿವಾರಸಂತೆ, ಫೆ. 25: ಓದು-ಬರಹ ಹಾಗೂ ಅಭಿವ್ಯಕ್ತಿ ಸಾಮಥ್ರ್ಯಗಳ ಕಾರ್ಯಕ್ರಮಗಳನ್ನು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ನಡೆಸಿದರೆ ಶೈಕ್ಷಣಿಕ ಪ್ರಗತಿ ಸಾಧಿಸಬಹುದು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್ ಅಭಿಪ್ರಾಯಪಟ್ಟರು.

ಸಮೀಪದ ಮೂದರವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಎ)ಯ ಸಭಾಂಗಣದಲ್ಲಿ ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ಓದು-ಬರಹ ಹಾಗೂ ಅಭಿವ್ಯಕ್ತಿ ಸಾಮಥ್ರ್ಯಗಳ ಸ್ಪರ್ಧಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್ಲಾ ಶಾಲೆಗಳಲ್ಲೂ ಏಕರೂಪ ಶಿಕ್ಷಣ ಜಾರಿಯಾಗಬೇಕು. ಸರ್ಕಾರಿ ಶಾಲೆಗಳಲ್ಲಿಯೇ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಸಂಪನ್ಮೂಲ ವ್ಯಕ್ತಿ ಡಿ.ಎಸ್. ಮಧುಕುಮಾರ್ ಮಾತನಾಡಿ, ಮಕ್ಕಳಲ್ಲಿ ಓದುವ, ಬರೆಯುವ ಹಾಗೂ ಭಾವನೆಗಳನ್ನು ಅಭಿವ್ಯಕ್ತಪಡಿಸುವ, ಸಾಮಥ್ರ್ಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಓದು, ಬರಹ, ಮಾಸಾಚರಣೆ ಕಾರ್ಯಕ್ರಮದಡಿ ವಿವಿಧ ಚಟುವಟಿಕೆಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಗೆ ಪ್ರೋತ್ಸಾಹ ಹಾಗೂ ಸೃಜನಾತ್ಮಕ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸ ಬಹುದು. ಸ್ಪರ್ಧಾ ಮನೋಭಾವವನ್ನು ಬೆಳೆಸಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಂಡ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬೆಳ್ಳಿಗೌಡ ಹಾಗೂ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಡಿ.ಡಿ. ರೇಣುಕಾ ಮಾತನಾಡಿದರು.

ಮುಖ್ಯ ಶಿಕ್ಷಕಿ ಎಸ್.ಆರ್. ಮಮತಾ, ಸಹ ಶಿಕ್ಷಕಿಯರಾದ ಬಿ.ವಿ. ಜ್ಯೋತಿ, ಗಾಯತ್ರಿ, ಸಮಿತಿ ಸದಸ್ಯರಾದ ಗೋಪಾಲಕೃಷ್ಣ, ದೇವರಾಜು, ಲಿಂಗರಾಜು, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಉಪಸ್ಥಿತರಿದ್ದರು.

- ನರೇಶ್ಚಂದ್ರ