ಸಿದ್ದಾಪುರ, ಫೆ. 25: ಗ್ರಾ.ಪಂ. ಅಧ್ಯಕ್ಷರು ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು, ಇದು ಅಭಿವೃದ್ಧಿಯ ಭಾಗವೇ ಎಂದು ಸಿ.ಪಿ.ಐ.ಎಂ. ಪಕ್ಷದ ಮುಖಂಡ ಅನಿಲ್ ಕುಟ್ಟಪ್ಪ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಸಿ.ಪಿ.ಐ.ಎಂ. ಪಕ್ಷ ಅಭಿವೃದ್ಧಿ ವಿರೋಧಿ ಎಂದು ಹೇಳಿಕೆಯನ್ನು ನೀಡಿದ್ದು, ಕಸದ ವಿಲೇವಾರಿ ಬಗ್ಗೆ ಪ್ರಶ್ನಸಿದಕ್ಕೆ ಅಭಿವೃದ್ಧಿ ವಿರೋಧಿ ಎಂದಿರುವದನ್ನು ತೀವ್ರವಾಗಿ ಖಂಡಿಸಿದರು.

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷರು ಎಂ.ಜಿ. ರಸ್ತೆಯಲ್ಲಿ ಸರಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಅತಿಕ್ರಮಿಸಿಕೊಂಡು ಬಹುಮಹಡಿ ಕಟ್ಟಡವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಗ್ರಾ.ಪಂ ಸದಸ್ಯರು ಯಾವದೇ ಕಾಮಗಾರಿಯನ್ನು ತಮ್ಮ ಹೆಸರಿನಲ್ಲಿ ಕೈಗೆತ್ತಿಕೊಳ್ಳಬಾರದೆಂದು ಕಾನೂನು ಇದೆ. ಇದೆಲ್ಲವೂ ಅಭಿವೃದ್ಧಿಯ ಪರವೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಕೆಲವು ಗ್ರಾ.ಪಂ ಸದಸ್ಯರು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಕೊಂಡು ತಮ್ಮದೇ ತೋಟದಲ್ಲಿ ಬಾವಿಯನ್ನು ನಿರ್ಮಿಸಿದ್ದಾರೆ. ಸದಸ್ಯರೋರ್ವರು ಬಸವ ವಸತಿ ಯೋಜನೆಯಲ್ಲಿ ಬೇರೆ ಹೆಸರಿನಲ್ಲಿ ಮನೆಯನ್ನು ಪಡೆದುಕೊಂಡಿದ್ದು, ಇದೀಗ ಸರಕಾರದ ಮನೆಯನ್ನು ದುಬಾರಿ ಬಾಡಿಗೆಗೆ ನೀಡಿದ್ದಾರೆ ಎಂದು ಆರೋಪಿಸಿದರು. ವಲಯ ಕಾಂಗ್ರೆಸ್‍ನ ಮುಖಂಡರೋರ್ವರು ಗುಹ್ಯ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಪಂಗಡದವರ ಮನೆಗೆ ತೆರಳಬೇಕಾದ ರಸ್ತೆಯನ್ನು ಬೇರೆಡೆ ಮಾಡಿದ್ದಾರೆ ಎಂದು ದೂರಿದರು.

ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಗ್ರಾ.ಪಂ ಕಸವನ್ನು ಪಂಚಾಯಿತಿ ಆವರಣದಲ್ಲಿ ರಾಶಿ ಮಾಡುತ್ತಿದ್ದು, ದುರ್ನಾತ ಬೀರುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಕಸದ ವಿಚಾರವನ್ನು ಮುಂದಿಟ್ಟುಕೊಂಡು ಇತ್ತೀಚೆಗೆ ಅಧ್ಯಕ್ಷರು ರಾಜೀನಾಮೆ ನೀಡುವ ನಾಟಕವಾಡಿ, ಬಳಿಕ ಕುರ್ಚಿ ಆಸೆಯಿಂದ ರಾಜೀನಾಮೆಯನ್ನು ಹಿಂಪಡೆದುಕೊಂಡಿರುವದು ಹಾಸ್ಯಾಸ್ಪದವಾಗಿದೆ ಎಂದರು. ಸಿ.ಪಿ.ಐ.ಎಂ. ಗ್ರಾಮಸಮಿತಿ ಕಾರ್ಯದರ್ಶಿ ಬೈಜು ಮಾತನಾಡಿ, ಸಿದ್ದಾಪುರ ಗ್ರಾ.ಪಂ.ಯ ಆಡಳಿತ ಮಂಡಳಿ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸದೆ ಗ್ರಾಮಸ್ಥರನ್ನು ವಂಚಿಸುತ್ತಿದೆ. ಗ್ರಾ.ಪಂ.ನ ಜನವಿರೋಧಿ ನೀತಿಯನ್ನು ಖಂಡಿಸಿ ತಾ. 27 ರಂದು ಗ್ರಾ.ಪಂ. ಮುಂಭಾಗ ಪ್ರತಿಭಟನೆ ಹಾಗೂ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.