ಸೋಮವಾರಪೇಟೆ, ಫೆ. 25: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನ ದೊಡ್ಡಬಳ್ಳಾಪುರ ಕನಸವಾಡಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯಮಟ್ಟದ ವಿಕಲಚೇತನರ ಕ್ರೀಡಾಕೂಟದಲ್ಲಿ ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದು ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ರ ವಯೋಮಿತಿಯ ವಿಭಾಗದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಜ್ಞಾನಗಂಗ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ನಿಶಾಂತ್ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ದ್ದಾನೆ. ಬಾಲಕಿಯರ ವಿಭಾಗದಲ್ಲಿ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕೆ.ಆರ್. ಗೌತಮಿ ಭರ್ಜಿ ಎಸೆತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ಉದ್ದ ಜಿಗಿತ ಸ್ಪರ್ಧೆಯಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಂ.ಎ. ಕಿರಣ್ ಬೆಳ್ಳಿ ಪದಕ ಪಡೆದಿದ್ದಾನೆ.
ಬಾಲಕರ ವಿಭಾಗದ ಭರ್ಜಿ ಎಸೆತದಲ್ಲಿ ಕೂಡಿಗೆ ಮೊರಾರ್ಜಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎಸ್. ಸೃಜನ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾನೆ. ಬಾಲಕಿಯರ ವಿಭಾಗದಲ್ಲಿ ಮಾದಾಪುರದ ಚನ್ನಮ್ಮ ಪ.ಪೂ. ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿ ಎ.ಯು. ಚಿತ್ರಶ್ರೀ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾಳೆ.
14ರ ವಯೋಮಿತಿಯ ಉದ್ದ ಜಿಗಿತ ಸ್ಪರ್ಧೆಯಲ್ಲಿ ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಸಜೀರ್ ಬೆಳ್ಳಿ ಪದಕ ಪಡೆದಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ವಿಶೇಷ ಚೇತನರ ಅಥ್ಲೇಟಿಕ್ಸ್ ಸ್ಪರ್ಧೆಯ ಮಾಸ್ಟರ್ ತರಬೇತಿ ಪಡೆದಿರುವ ಬಿ.ಬಿ. ವೀರಭದ್ರಪ್ಪ (ಐಇಆರ್‍ಟಿ) ವಿಕಲ ಚೇತನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.