ವೀರಾಜಪೇಟೆ, ಫೆ.25: ಸಮಾಜದಲ್ಲಿ ಎಲ್ಲ ದಾನಗಳಿ ಗಿಂತಲೂ ಒಂದು ಜೀವವನ್ನು ಉಳಿಸುವ, ಕಾಪಾಡುವ ರಕ್ತದಾನ ಸರ್ವ ಶ್ರೇಷ್ಠ ಹಾಗೂ ಅಮೂಲ್ಯ ಎಂದು ಹಿರಿಯ ವಕೀಲ ಬಿ.ರತ್ನಾಕರ ಶೆಟ್ಟಿ ಹೇಳಿದರು.
ವೀರಾಜಪೇಟೆಯ ಸರ್ವ ಜನಾಂಗ ಸಂಘಟನೆಯಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ರಕ್ತ ಹಾಗೂ ನೇತ್ರದಾನದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯ ಡಾ. ನಾಗಲಕ್ಷ್ಮಿ ಮಾತನಾಡಿ ಆರೋಗ್ಯವಂತರು ರಕ್ತದಾನ ಮಾಡುವದರಿಂದ ಆರೋಗ್ಯವನ್ನು ಕಾಪಾಡಲು ಸಾಧ್ಯ. ಆರ್ಥಿಕವಾಗಿ ಹಿಂದುಳಿದವರು, ಕಡು ಬಡವರು, ಉಚಿತವಾಗಿ ರಕ್ತವನ್ನು ಪಡೆಯಲು ಸರಕಾರ ಯೋಜನೆಯನ್ನು ರೂಪಿಸಿದೆ. ಒಂದು ವ್ಯಕ್ತಿಯಿಂದ ಸಂಗ್ರಹಿಸಿದ ರಕ್ತವನ್ನು 35 ದಿನಗಳವರೆಗೆ ಮಾತ್ರ ಶಿಥಿಲೀಕರಿಸಿ ಸಂಗ್ರಹಿಸಿಡಬಹುದು. ನಂತರ ಈ ರಕ್ತ ಉಪಯೋಗಕ್ಕೆ ಬರುವದಿಲ್ಲ. ದಾನವಾಗಿ ಬಂದ ರಕ್ತವನ್ನು ರೋಗಿಗಳು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಹೇಳಿದರು.
ಶಿಬಿರವನ್ನು ರಕ್ತ ದಾನ ಮಾಡುವ ಮೂಲಕ ಉದ್ಘಾಟಿಸಿದ ಪತ್ರಕರ್ತ ಪಳೆಯಂಡ ಪಾರ್ಥ ಚಿಣ್ಣಪ್ಪ ಮಾತನಾಡಿ ಸಂಘಟನೆಗಳು ಶಿಬಿರದ ಮೂಲಕ ಸಂಗ್ರಹಿಸುವ ರಕ್ತವನ್ನು ಮಾರಾಟ ಅಥವಾ ಖರೀದಿ ಮಾಡಲು ಅವಕಾಶ ನೀಡಬಾರದು. ಇದು ಸಮಾಜದ ಕಟ್ಟ ಕಡೆಯ ಸಾಮಾನ್ಯ ಮನುಷ್ಯನಿಗೆ ಉಪಯೋಗವಾಗಬೇಕು ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಸಂಘಟನೆಯ ಗೌರವ ಅಧ್ಯಕ್ಷ ಹಾಗೂ ಉದ್ಯಮಿ ಚೋಪಿ ಜೋಸೆಫ್ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅಗತ್ಯವಾಗಿರುವ ತಜ್ಞ ವೈದ್ಯರಿಂದ ಹೃದಯ ರೋಗಿಗಳ ತಪಾಸಣೆ, ಚಿಕಿತ್ಸಾ ಸಲಹೆಯ ಶಿಬಿರಗಳನ್ನು ಏರ್ಪಡಿಸಲು ಸಂಘಟನೆ ಚಿಂತನೆ ನಡೆಸಿದೆ ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಮಾಳೇಟಿರ ಕಾಶಿ ಕುಂಞಪ್ಪ, ಬೊಪ್ಪಂಡ ಸುನಿಲ್, ಕುಂಞರ ಸುನು ಸುಬ್ಬಯ್ಯ, ಕರ್ನಾಟಕ ರಕ್ಷಣಾ ವೇದಿಕೆಯ ನಗರ ಸಮಿತಿ ಅಧ್ಯಕ್ಷ ಕೀತಿಯಂಡ ಮಂಜು, ವಿ.ಪಿ. ಮಾಹೀನ್, ಎ.ಎಸ್.ಐ. ಶಿವಪ್ಪ, ನೇತ್ರ ತಜ್ಞ ವಿಭಾಗದ ರವಿ, ಉಪಸ್ಥಿತರಿದ್ದರು. ಸಂಘಟನೆಯ ಎಂ.ಎಂ. ಶಶಿಧರನ್ ಕಾರ್ಯಕ್ರಮ ನಿರೂಪಿಸಿದರು.