ಬಹುಜನ ವಿದ್ಯಾರ್ಥಿ ಸಂಘ ಒತ್ತಾಯ

ಮಡಿಕೇರಿ, ಫೆ. 25: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರಕಾರ ಸುಪ್ರೀಂಕೋರ್ಟ್‍ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಬಹುಜನ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಸಿ.ಜೆ. ಮೋಹನ್ ಮೌರ್ಯ, ಕಳೆದ 68 ವರ್ಷಗಳ ಕಾಲ ಆಡಳಿತ ನಡೆಸಿದ ಸರಕಾರಗಳು ಒಬಿಸಿ, ಎಸ್‍ಸಿ, ಎಸ್‍ಟಿ ಸಮುದಾಯಗಳಿಗೆ ಘೋರ ಅನ್ಯಾಯವನ್ನು ಮಾಡಿವೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮುಂದೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಬೇಕು, ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿದ ನ್ಯೂನತೆಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಸರಕಾರ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಹೊಸ ಕಾನೂನನ್ನು ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಮಂಡಿಸಿ ಪಾಸು ಮಾಡಬೇಕು, ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಸಂವಿಧಾನದ 117ನೇ ತಿದ್ದುಪಡಿ ವಿಧೇಯಕವನ್ನು ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿ ಆದೇಶ ಹೊರಡಿಸಬೇಕು ಮತ್ತು ಮೀಸಲಾತಿಯನ್ನು ಸಂರಕ್ಷಿಸಲು ಮೀಸಲಾತಿ ವಿಧೇಯಕಗಳನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಬೇಕೆಂದು ಮೋಹನ್ ಮೌರ್ಯ ಒತ್ತಾಯಿಸಿದರು.

“ಮೀಸಲಾತಿ ನೀವು ನೀಡುವ ಭಿಕ್ಷೆಯಲ್ಲ, ಅದು ನಮ್ಮ ಸಂವಿಧಾನ ಬದ್ಧ ಹಕ್ಕು, ಅದನ್ನು ಉಳಿಸಿಕೊಡುವದು ನಿಮ್ಮ ಕರ್ತವ್ಯ” ಎಂದು ಶಾಸಕರು ಹಾಗೂ ಸಂಸದರನ್ನು ಅವರು ಉಲ್ಲೇಖಿಸಿ ನಿರ್ಲಕ್ಷ್ಯವನ್ನು ಖಂಡಿದರು.

ಗೋಷ್ಠಿಯಲ್ಲಿ ಕುಶಾಲನಗರ ಸಂಯೋಜಕ ಬಿ. ಲಕ್ಷ್ಮಣ್ ಹಾಗೂ ದಿಲೀಪ್ ಕುಮಾರ್ ಉಪಸ್ಥಿತರಿದ್ದರು.