ಸೋಮವಾರಪೇಟೆ, ಫೆ.27: ‘ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ದೂರುಗಳನ್ನು ದಾಖಲಿಸಿ ತನಿಖೆಗೆ ಆದೇಶಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದರಲ್ಲಿ ಅವರಿಗಾಗಲೀ ಕಾಂಗ್ರೆಸ್ ಪಕ್ಷಕ್ಕಾಗಲಿ ಯಾವದೇ ಲಾಭ ಸಿಗುವದಿಲ್ಲ’ ಎಂದು ಮಾಜೀ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಸಮೀಪದ ಗೌಡಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಆರೋಪ, ದೂರುಗಳ ವಿಚಾರಣೆ ನಡೆದು ಬಿಎಸ್ವೈ ಅವರ ಪರವಾಗಿಯೇ ತೀರ್ಪು ಹೊರಬಿದ್ದಿದೆ. ಇಲ್ಲಸಲ್ಲದ ಆರೋಪಗಳನ್ನು ಮಾಡುವ ಕಾಂಗ್ರೆಸ್ಗೆ ಇದರಿಂದ ಹಿನ್ನಡೆಯಾಗಿದೆ. ಇದೀಗ ಮತ್ತೆ ಬಿಎಸ್ವೈರನ್ನು ಹಣಿಯಲು ದ್ವೇಷದ ರಾಜಕಾರಣಕ್ಕೆ ಇಳಿದಿದ್ದಾರೆ’ ಎಂದರು.
‘ಈಗಾಗಲೇ ಪ್ರಕರಣ ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಯಡಿಯೂರಪ್ಪ ನಿರ್ದೋಷಿ ಎಂದು ತೀರ್ಪುಬಂದಿದೆ. ಇದೇ ತೀರ್ಪು ಸುಪ್ರೀಂ ಕೋರ್ಟ್ನಲ್ಲೂ ಬರುತ್ತದೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆಯಿದ್ದು, ನ್ಯಾಯ ಸಿಕ್ಕೇ ಸಿಗುತ್ತದೆ. ವಿಚಾರಣೆ ಸುಪ್ರೀಂ ಕೊರ್ಟ್ನಲ್ಲಿರುವದರಿಂದ ನಮ್ಮ ಬಳಿ ಸಾಕ್ಷ್ಯ ಇದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದು, ಅಡಿಷನಲ್ ಎವಿಡೆನ್ಸ್ಗಳನ್ನು ನೀಡಲು ಬರುವದಿಲ್ಲ. ಆದರೂ ಮೂರೂವರೆ ವರ್ಷ ಸರ್ಕಾರ ಇದ್ದುದರಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಕೊಡಬೇಕಷ್ಟೇ. ಇಂತಹ ಬೆದರಿಕೆಗಳಿಗೆ ಪಕ್ಷ ಹೆದರುವದಿಲ್ಲ’ ಎಂದರು.
‘ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಇಚ್ಚಾಶಕ್ತಿಯಿಲ್ಲ. ಸುಖಾಸುಮ್ಮನೇ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಸಾಲ ಮನ್ನಾ ಆಗಬೇಕಾದರೆ ಪ್ರಸ್ತುತ ರಾಜ್ಯದ ಸ್ಥಿತಿಗತಿ, ಸಾಲದ ಅಂಕಿ ಅಂಶಗಳನ್ನು ಒಳಗೊಂಡಂತೆ ತಮ್ಮ ಪಾಲಿನ ಮೊತ್ತವನ್ನೂ ನಮೂದಿಸಿ ಕೇಂದ್ರ ಸರ್ಕಾರಕ್ಕೆ ಸಮಗ್ರ ಬೇಡಿಕೆಯ ಪಟ್ಟಿ ನೀಡಬೇಕು. ನಂತರ ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತದೆ. ಇದನ್ನು ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿಯನ್ನು ದೂರುತ್ತಾ ಕಾಲಹರಣ ಮಾಡುತ್ತಿದೆ. ಇದು ಸರಿಯಾದ ಆಡಳಿತ ನೀತಿಯೂ ಅಲ್ಲ’ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.