ಗೋಣಿಕೊಪ್ಪಲು, ಫೆ. 27: ಬಿ.ಶೆಟ್ಟಿಗೇರಿ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗಳಿಗೆ ಭಾಗಶಃ ಒಳಪಡುವ ಗುಡ್ಡಮಾಡು ಗಿರಿಜನ ಕಾಲೋನಿಗೆ ಸಂಪರ್ಕ ಕಾಂಕ್ರೀಟ್ ರಸ್ತೆಯನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಇಂದು ಶಾಸಕ ಕೆ.ಜಿ.ಬೋಪಯ್ಯ ಹಾಗೂ ಬಿಟ್ಟಂಗಾಲ ಕ್ಷೇತ್ರದ ಜಿ.ಪಂ.ಸದಸ್ಯೆ ಅಪ್ಪಂಡೇರಂಡ ಭವ್ಯ ಅವರು ಜಂಟಿಯಾಗಿ ಉದ್ಘಾಟಿಸಿದರು.
ಸುಮಾರು 3 ಮೀಟರ್ ಅಗಲ ಹಾಗೂ 300 ಮೀಟರ್ ಉದ್ದದ ರಸ್ತೆ ಕಾಮಗಾರಿಯನ್ನು ಲೋಕೋ ಪಯೋಗಿ ಇಲಾಖೆ ಮೂಲಕ ನಿರ್ವಹಿಸಲಾಗಿದ್ದು, ಈ ಭಾಗದ ಜನತೆ ಮಳೆಗಾಲದಲ್ಲಿ ಅನುಭವಿಸುತ್ತಿದ್ದ ಬವಣೆಗೆ ಸಾಂತ್ವನ ನೀಡಿದಂತಾಗಿದೆ ಎಂದು ಶಾಸಕ ಬೋಪಯ್ಯ ಹೇಳಿದರು.
ಬಿ.ಶೆಟ್ಟಿಗೇರಿ ವಿಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಸರ್ಕಾರದ ಅನುದಾನದ ಕೊರತೆಯಿಂದಾಗಿ ಕುಂಟುತ್ತಾ ಸಾಗಿದೆ. ಕಳೆದ ಸಾಲಿನಲ್ಲಿ ವೀರಾಜಪೇಟೆ ತಾಲೂಕು ಕುಡಿಯುವ ನೀರು ಯೋಜನೆಗೆ ಸರ್ಕಾರ ಒಟ್ಟು ರೂ.13 ಕೋಟಿ ಬಾಕಿ ಉಳಿಸಿಕೊಂಡಿದ್ದು, ಇದೀಗ ರೂ.6 ಕೋಟಿ ಬಿಡುಗಡೆ ಮಾಡಿದೆ. ಇನ್ನೂ ರೂ.7 ಕೋಟಿ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲು ಒತ್ತಾಯಿಸಿದರು.
ರಾಜ್ಯದ 160 ತಾಲೂಕುಗಳಲ್ಲಿ ಬರಗಾಲದ ಹಿನ್ನೆಲೆ ಕೇಂದ್ರ ಅಧ್ಯಯನ ತಂಡವು ರಾಜ್ಯದಲ್ಲಿ ಸುಮಾರು ರೂ. 27 ಸಾವಿರ ನಷ್ಟ ಅಂದಾಜಿಸಿದೆ. ಸುಮಾರು ರೂ.7.50 ಸಾವಿರ ಕೋಟಿಯನ್ನು ಇದೀಗ ಬಿಡುಗಡೆ ಮಾಡಿದೆ. ಕೊಡಗಿನ ಮೂರು ತಾಲೂಕಿನಲ್ಲಿಯೂ ಸುಮಾರು 3,500 ಕೋಟಿ ನಷ್ಟವಾಗಿದ್ದು ಇನ್ನೂ ಯಾವದೇ ಪರಿಹಾರ ರೈತರಿಗೆ ತಲಪಿಲ್ಲ ಎಂದರು.
ಕೂಟಿಯಾಲ-ಬಿಟ್ಟಂಗಾಲ ಸಂಪರ್ಕ ರಸ್ತೆ ಅರಣ್ಯ ಇಲಾಖೆಯ ಅಡ್ಡಿ ನಿವಾರಣೆಯಾಗಿದ್ದರೂ, ಕಾನೂನು ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ. ಇಚ್ಛಾಶಕ್ತಿಯ ಕೊರತೆ ಕಾಮಗಾರಿ ನಿಧಾನಗತಿಗೆ ಕಾರಣವಾಗಿದೆ ಎಂದು ಹೇಳಿದರು.
ಜಿ.ಪಂ.ಸದಸ್ಯೆ ಅಪ್ಪಂಡೇರಂಡ ಭವ್ಯ ಅವರು ಮಾತನಾಡಿ ಬಿಟ್ಟಂಗಾಲ ಕ್ಷೇತ್ರದಲ್ಲಿ ಹಲವಷ್ಟು ಸಮಸ್ಯೆಗಳಿದ್ದು ರಾಜ್ಯ ಸರ್ಕಾರದ ಅನುದಾನ ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿರುವದಾಗಿ ಹೇಳಿದರು.
ಬಿ.ಶೆಟ್ಟಿಗೇರಿ ಗ್ರಾ.ಪಂ.ಅಧ್ಯಕ್ಷ ಕಡೇಮಾಡ ಅಶೋಕ್ ಅವರು ಮಾತನಾಡಿ, ಕೊಂಗಣ ನದಿ ತಿರುವು ಯೋಜನೆಯನ್ನು ಯಾವದೇ ಕಾರಣಕ್ಕೆ ಅನುಷ್ಠಾನಕ್ಕೆ ಬಿಡಲಾರೆವು. ಬಿ.ಶೆಟ್ಟಿಗೇರಿಯಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಈ ಬಾರಿ 150 ಇಂಚಿಗೂ ಅಧಿಕ ಮಳೆಯಾಗಿದ್ದರೂ ಕುಡಿಯುವ ನೀರಿನ ಕ್ಷಾಮ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ವಿಜು, ಪ್ರಮುಖರಾದ ಮಲ್ಲಂಡ ಮಧು ದೇವಯ್ಯ, ವೀರಾಜಪೇಟೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ತೀತಿಮಾಡ ಲಾಲಾ ಭೀಮಯ್ಯ, ಪ್ರಮುಖರಾದ ಕಾಡ್ಯಮಾಡ ಅನಿಲ್, ಗುತ್ತಿಗೆದಾರ ನಾಮೇರ ನವೀನ್, ಎಪಿಎಂಸಿ ಸದಸ್ಯೆ ನಾಮೇರ ಧರಣಿ ಮುಂತಾದವರು ಪಾಲ್ಗೊಂಡಿದ್ದರು.
- ಟಿ.ಎಲ್.ಶ್ರೀನಿವಾಸ್