ಪೊನ್ನಂಪೇಟೆ, ಫೆ. 27: ಕೇಂದ್ರದ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ರಾಷ್ಟ್ರಾಧ್ಯಂತ ನಡೆಯುವ ಕಾಂಗ್ರೆಸ್ ‘ಜನವೇದನಾ ಸಮಾವೇಶ’ವು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾ 6 ರಂದು ಪೊನ್ನಂಪೇಟೆಯಲ್ಲಿ ಆಯೋಜಿಸುವಂತೆ ತೀರ್ಮಾನಿಸಲಾಯಿತು.

ಸೋಮವಾರದಂದು ಗೋಣಿಕೊಪ್ಪಲಿನಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಅಧಿಕಾರಕ್ಕೆ ಬಂದಲ್ಲಿಂದ ಜನಸಾಮಾನ್ಯರ ಬದುಕಿಗೆ ತೀರ ಹಿನ್ನಡೆಯಾಗಿದೆ. ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಎಲ್ಲಾ ಹಂತದಲ್ಲೂ ತೊಂದರೆಯಾಗಿದೆ. ಕೂಲಿ ಕಾರ್ಮಿಕರ ಬದುಕಂತೂ ಮೂರಾಬಟ್ಟೆಯಾಗಿದೆ. ರೈತರಿಗೆ ನೆರವಾಗುವದಾಗಿ ಭರವಸೆ ನೀಡುತ್ತಾ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಸರಕಾರ ರೈತರನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಿದೆ. ಕೇಂದ್ರದ ರೈತ ವಿರೋಧಿ ನೀತಿಯಿಂದಾಗಿ ಬಡ ರೈತರು ಇಂದು ಪಡೆದ ಸಾಲ ನವೀಕರಿಸಲು ಸಾಧ್ಯವಾಗದೆ ಶೇ.14ರಷ್ಟು ಬಡ್ಡಿ ಪಾವತಿಸುವಂತಾಗಿದೆ. ಕೇಂದ್ರದ ಜನವಿರೋಧಿ ನೀತಿಯಿಂದಾಗಿ ಜನ ಪ್ರತಿನಿತ್ಯ ವೇದನೆಯನ್ನು ಅನುಭವಿಸುತ್ತಿದ್ದು, ಇದನ್ನು ಸಾರ್ವಜನಿಕರ ಮುಂದಿಟ್ಟು ಎನ್.ಡಿ.ಎ ಸರಕಾರದ ಜನವಿರೋಧಿ ಕಾರ್ಯಗಳನ್ನು ವಿರೋಧಿಸುವ ಉದ್ದೇಶದಿಂದ ದೇಶದಾದ್ಯಂತ ಜನವೇದನಾ ಸಮಾವೇಶವನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಭಾಗವಾಗಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾ. 6ರಂದು ಈ ಕಾರ್ಯಕ್ರಮ ಏರ್ಪಡಿಸಿರುವದಾಗಿ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಹೇಳಿದರು.

ಮಾ.6ರಂದು ಸಂಜೆ 4.30 ಗಂಟೆಗೆ ಪೊನ್ನಂಪೇಟೆ ಬಸ್ ನಿಲ್ದಾಣದ ಆವರಣದಲ್ಲಿ ಜನವೇದನಾ ಸಮಾವೇಶ ಜರುಗಲಿದ್ದು, ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ, ಪಕ್ಷದ ಕೊಡಗು ಉಸ್ತುವಾರಿ ಹೊತ್ತಿರುವ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹುಸೈನ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಡಿ.ಸಿ.ಸಿ. ಅಧ್ಯಕ್ಷ ಟಿ.ಪಿ. ರಮೇಶ್ ಸೇರಿದಂತೆ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿ ಕೇಂದ್ರದ ಜನವಿರೋಧಿ ನೀತಿಗಳನ್ನು ಜನತೆಯ ಮುಂದಿಡಲಿದ್ದಾರೆ ಎಂದು ವಿವರಿಸಿದ ಧರ್ಮಜ ಉತ್ತಪ್ಪ ಅವರು ಕಾರ್ಯಕ್ರಮಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರುವ ಜವಬ್ದಾರಿಯನ್ನು ಬ್ಲಾಕ್‍ನ ಎಲ್ಲಾ ವಲಯ ಅಧ್ಯಕ್ಷರು ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಸಭೆಯಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಪಕ್ಷದ ಪ್ರಮುಖರಾದ ಎಂ.ಎಸ್. ಕುಶಾಲಪ್ಪ, ಕೆ.ಎಂ ಸರಾ ಚಂಗಪ್ಪ, ಪಿ.ಕೆ.ಪೊನ್ನಪ್ಪ, ವಿ.ಕೆ.ಪೋಕುಟ್ಟಿ, ಅಜಿತ್ ಅಯ್ಯಪ್ಪ, ಅಬ್ದುಲ್ ರೆಹಮಾನ್ ಬಾಪು, ಸಾಜಿ ಅಚ್ಯುತ್ತನ್, ಎ.ಎಸ್. ಟಾಟು ಮೊಣ್ಣಪ್ಪ, ಮಂಜುಳ ಜಿ.ಪಂ. ಸದಸ್ಯೆ ಪಿ.ಆರ್.ಪಂಕಜಾ, ತಾ.ಪಂ. ಸದಸ್ಯರಾದ ಪಲ್ವೀನ್ ಪೂಣಚ್ಚ ಸೇರಿದಂತೆ ವಿವಿಧ ವಲಯದ ಅಧ್ಯಕ್ಷರು, ಪ್ರಮುಖರು ಹಾಜರಿದ್ದರು. ಆರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು ಸ್ವಾಗತಿಸಿದರೆ, ಕೊನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಾಡ್ಯಮಾಡ ಚೇತನ್ ವಂದಿಸಿದರು.