ಸಿದ್ದಾಪುರ, ಫೆ. 27: ಗ್ರಾಮ ಪಂಚಾಯಿತಿಯು ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಹಾಗೂ ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಿ.ಪಿ.ಐ (ಎಂ) ಪಕ್ಷವು ಗ್ರಾ.ಪಂ. ಮುಂಭಾಗ ಪ್ರತಿಭಟನೆ ನಡೆಸಿತು.
ಸಿದ್ದಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡ ಎನ್.ಡಿ ಕುಟ್ಟಪ್ಪ, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷರು ಕಸ ವಿಲೇವಾರಿ ಜಾಗದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅನಗತ್ಯವಾಗಿ ಅಧಿಕಾರಿಗಳ ಮೇಲೆ ಗೂಬೆÉ ಕೂರಿಸುತ್ತಿದ್ದಾರೆ ಎಂದು ದೂರಿದರು. ಗಿರಿಜನರ ಬಗ್ಗೆ ಅತೀವ ಕಾಳಜಿಯ ತೋರುತ್ತಿರುವ ಎಸ್.ಡಿ.ಪಿ.ಐ. ಪಕ್ಷ ದಿಡ್ಡಳ್ಳಿ ಹೋರಾಟದಲ್ಲಿ ಭಾಗವಹಿಸಿದೆ. ಆದರೆ ಸಿದ್ದಾಪುರ ಗ್ರಾ.ಪಂ.ನಲ್ಲಿ ಹಲವು ಸದಸ್ಯರು ಹರಿಜನ- ಗಿರಿಜನರಿಗೆ ನೀಡಬೇಕಾದ ಅನುದಾನವನ್ನು ದುರ್ಬಳಕೆ ಮಾಡುತ್ತಿರುವ ವಿಚಾರ ಎಸ್.ಡಿ.ಪಿ.ಐ. ಸದಸ್ಯರಿಗೆ ತಿಳಿದಿದ್ದರೂ ಈ ಬಗ್ಗೆ ಅವರು ಚಕಾರವೆತ್ತುತ್ತಿಲ್ಲ ಎಂದು ಟೀಕಿಸಿದರು.
(ಮೊದಲ ಪುಟದಿಂದ) ಮುಂದಿನ 15 ದಿನಗಳಲ್ಲಿ ಸಮರ್ಪಕವಾದ ರೀತಿಯಲ್ಲಿ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಪಕ್ಷದ ಮುಖಂಡ ಅನಿಲ್ ಮಾತನಾಡಿ, ಗ್ರಾ.ಪಂ. ಸದಸ್ಯರೊರ್ವರು ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿ ಅದನ್ನು ಬಾಡಿಗೆಗೆ ನೀಡಿದ್ದಾರೆ. ಮತ್ತೋರ್ವ ಸದಸ್ಯರು ತಮ್ಮ ಖಾಸಗಿ ತೋಟಕ್ಕೆ ಶೇ. 25ರ ಅನುದಾನದಲ್ಲಿ ಬಾವಿಯನ್ನು ಮಾಡಿಸಿದ್ದು, ಸಿದ್ದಾಪುರ ಗ್ರಾ.ಪಂ.ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದಾಪುರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಶ್ವಾನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಸಿ.ಪಿ.ಐ (ಎಂ) ಪಕ್ಷದ ಮುಖಂಡರಾದ ಬೈಜು, ಮುಸ್ತಫ, ನಾರಾಯಣ, ಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.