ವೀರಾಜಪೇಟೆ, ಫೆ. 27: ದಂತ ವೈದ್ಯದ ಸಂಶೋಧನೆಯಲ್ಲಿ ವಿಶ್ವದಲ್ಲಿಯೇ ಭಾರತದ ಪಾಲು ಹತಾಶದಾಯಕ. ಭಾರತವು ಅತಿ ಹೆಚ್ಚು ದಂತ ವೈದ್ಯ ವಿದ್ಯಾ ಸಂಸ್ಥೆಗಳನ್ನು ಹೊಂದಿದ್ದರು ಸಂಶೋಧನೆಯಲ್ಲಿ ನಿರಾಶಾದಾಯಕ ಪಾಲನ್ನು ಹೊಂದಿದೆ. ಭಾರತದ ಸಂಶೋಧನೆಯು ಅನೇಕ ರೀತಿಯಲ್ಲಿ ಅಸ್ತಿತ್ವದಲ್ಲಿರದ ಹಾಗೂ ಸಂಸ್ಥೆಗಳಿಗೆ ಆಶಾಭಂಗವಾಗುವ ಸರಕಾರದ ನೀತಿಗಳಿಂದ ಮುಗ್ಗರಿಸಿದೆ ಎಂದು ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ ಹೇಳಿದರು.

ಕೊಡಗು ದಂತ ಮಹಾ ವೈದ್ಯ ಕಾಲೇಜಿನಲ್ಲಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ 7 ದಶಕಗಳಿಂದ ನಡೆದುಕೊಂಡು ಬಂದಿರುವ ಈ ಅಸಮರ್ಥತೆಯನ್ನು ಸರಿಪಡಿಸಲು ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ. ಏಷ್ಯ ಖಂಡದಲ್ಲಿ ಅತೀ ಚಿಕ್ಕ ರಾಷ್ಟ್ರಗಳಾದ ದಕ್ಷಿಣ

(ಮೊದಲ ಪುಟದಿಂದ) ಕೊರಿಯ 7ನೇ ವಿಶ್ವ ದರ್ಜೆಯ ಹಾಗೂ ತೈವಾನ್ ಮೂರನೇ ವಿಶ್ವ ದರ್ಜೆಯ ವಿಶ್ವ ವಿದ್ಯಾಲಯಗಳನ್ನು ಹೊಂದಿವೆ. ಆದರೆ ಭಾರತದಿಂದ ಒಂದು ವಿಶ್ವ ವಿದ್ಯಾಲಯ ಈ ವರ್ಷ ಸೇರ್ಪಡೆಗೊಂಡಿದೆ. ಈ ಹಿನ್ನಲೆಯಲ್ಲಿ ಕೊಡಗು ದಂತ ವಿದ್ಯಾಲಯ ವಾರ್ಷಿಕ ಪದವೀಧರರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದಾಗಿ ತಿಳಿಸಿದರು.

ಮಲೇಶಿಯಾ ದೇಶದ ಮಾರದಲ್ಲಿರುವ ಯೂನಿವರ್ಸಿಟಿ ಟೆಕ್ನಾಲಜಿಯ ಡೀನ್ ಹಾಗೂ ಪ್ರಾಧ್ಯಾಪಕÀ ಮೊಹಮ್ಮದ್ ಇಬ್ರಾಹಿಂ ದೀಪ ಬೆಳಗಿಸಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಕೊಡಗು ದಂತ ಮಹಾ ವೈದ್ಯ ಕಾಲೇಜು ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಉತ್ತಮ ವಾತಾವರಣದಲ್ಲಿದೆ. ಕಾಲೇಜಿನಲ್ಲಿ ಪ್ರಥಮವಾಗಿ ಅಂತರಾಷ್ಟ್ರೀಯ ಮಟ್ಟದ ಸಂಶೋಧನ ಕಾರ್ಯಗಾರ ಹಮ್ಮಿಕೊಂಡಿರುವದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಇಂತಹ ಕಾರ್ಯಗಾರಗಳು ವಿದ್ಯಾ ಸಂಸ್ಥೆಯಲ್ಲಿ ನಿರಂತರವಾಗಿ ಆಯೋಜಿಸುವಂತಾಗಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸರಕಾರದ ತಂಬಾಕು ನಿಯಂತ್ರಣ ಮಂಡಳಿ ಸದಸ್ಯರು, ಹೆಲ್ತ್‍ಕೇರ್ ಗ್ಲೋಬಲ್ ಕ್ಯಾನ್ಸರ್ ಕೇಂದ್ರದ ಪ್ರೊ: ವಿಶಾಲ್ ರಾವ್ ದಂತ ವೈದ್ಯ ವಿದ್ಯಾರ್ಥಿಗಳ ಸಂಶೋಧನೆಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ನೀಡಿದರು.

ಅಂತರಾಷ್ಟ್ರೀಯ ದಂತ ಸಂಶೋಧನೆ ವಿಚಾರಗೋಷ್ಠಿಯಲ್ಲಿ ಭಾರತ ದೇಶದ ವಿವಿಧೆಡೆಗಳಿಂದ ಹಾಗೂ ದಕ್ಷಿಣ ಏಷ್ಯಾದ ವಿವಿಧ ವಿದ್ಯಾಸಂಸ್ಥೆಗಳಿಂದ 800ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಂಶೋಧನೆಗಳನ್ನು ಹಂಚಿಕೊಂಡರು. ಅತಿಥಿ ಉಪನ್ಯಾಸಕರು ಸಂಶೋಧನೆಯಲ್ಲಿನ ಮೂಲಭೂತ ಸೌಕರ್ಯಗಳು ಉಪಯೋಗಗಳ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪದವೀಧರರಿಗೆ ಮನವರಿಕೆ ಮಾಡಿಕೊಟ್ಟರು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ಪೊನ್ನಪ್ಪ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಟೋನಿ ಜೋಸೆಫ್ ಸ್ವಾಗತಿಸಿ, ಕಾರ್ಯದರ್ಶಿ ಪಾರ್ವತಿ ಸುದೀಪ್ ವಂದಿಸಿದರು.