ಕುಶಾಲನಗರ, ಫೆ. 27: ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಟ್ಟಡಗಳು, ಪ್ರತೀ ಕಟ್ಟಡದ ಆವರಣದಲ್ಲಿ ಮೊಬೈಲ್ ಟವರ್‍ಗಳು, ಅಧಿಕಾರಿ, ಸಿಬ್ಬಂದಿ ಗಳಿಗೆ ಸರಕಾರದ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳು, ಕೈತುಂಬಾ ಸಂಬಳ, ವಸತಿ ವ್ಯವಸ್ಥೆ, ಹವಾನಿಯಂತ್ರಿತ ಕೊಠಡಿಗಳು, ಕಂಪ್ಯೂಟರೀಕೃತ ವ್ಯವಸ್ಥೆಗಳು, ವಿದ್ಯುತ್ ವೈಫಲ್ಯವಾದರೆ 24*7 ಪರ್ಯಾಯ ವ್ಯವಸ್ಥೆ, ಇದರೊಂದಿಗೆ ಖಾಸಗಿ ಕಟ್ಟಡಗಳಲ್ಲಿ ಕೂಡ ಹೆಚ್ಚುವರಿ ಮೊಬೈಲ್ ಟವರ್‍ಗಳು ಕಾಣಸಿಗುವದರೊಂದಿಗೆ ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿ ಗ್ರಾಹಕರಿಗೆ ಇನ್ನೂ ಹಲವು ಸೇವೆಗಳ ಲಭ್ಯ. ಇದು ಬಿಎಸ್‍ಎನ್‍ಎಲ್ ಸಂಸ್ಥೆ ಕೊಡಗಿನಲ್ಲಿ ಉತ್ತಮ ಸೇವೆ ನೀಡಲು ಅದರ ನಿರ್ವಹಣೆ ಮಾಡಬೇಕಾದ ಅಧಿಕಾರಿ, ಸಿಬ್ಬಂದಿಗಳಿಗೆ, ಗ್ರಾಹಕರಿಗೆ ಕಲ್ಪಿಸಿದ ಸೌಕರ್ಯಗಳು.
ಆದರೆ, ಸೇವಾ ಸಂಸ್ಥೆಯಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾದ ಅಧಿಕಾರಿ, ಸಿಬ್ಬಂದಿ ಗಳು ಮಾತ್ರ ಎಲ್ಲವನ್ನು ಅನುಭವಿಸಿಕೊಂಡು ಗ್ರಾಹಕರನ್ನು ಮಾತ್ರ ಮರೆತಂತಿದೆ ಎಂದರೆ ತಪ್ಪಾಗಲಾರದು. ಮೊಬೈಲ್ ಗ್ರಾಹಕನ ಸುತ್ತಲೂ ಎಲ್ಲಿ ನೋಡಿದರಲ್ಲಿ ಮೊಬೈಲ್ ಟವರ್‍ಗಳಿದ್ದರೂ ಸಿಗ್ನಲ್ ಮಾತ್ರ ವೀಕ್.! ಇದನ್ನು ಪ್ರಶ್ನೆ ಮಾಡಬೇಕೆಂದರೆ ಮೊಬೈಲ್ ಜೊತೆಗೆ ಕಟ್ಟಡದ 3ನೇ ಮಹಡಿಗೆ ತೆರಳಿ ಮಾತನಾಡಬೇಕಾದ ಸ್ಥಿತಿ ಬಿಎಸ್‍ಎನ್‍ಎಲ್ ಗ್ರಾಹಕನಿಗೆ ಬಂದಿರುವದು ಇತ್ತೀಚಿನ ಬೆಳವಣಿಗೆ.
ಕಾರಣ ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿ ಅದೇ ಓಬಿರಾಯನ ಕಾಲದ ಅಧಿಕಾರಿ, ಸಿಬ್ಬಂದಿಗಳಿಂದ ಸೇವೆ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ. (2023 ರಲ್ಲಿ ಬಹುತೇಕ ಎಲ್ಲರೂ ನಿವೃತ್ತಿಗೊಳ್ಳಲಿರು ವವರು)
ನೂರಕ್ಕೆ ನೂರರಷ್ಟು ಕೆಲಸ ನಿರ್ವಹಿಸುವ ಬೆರಳೆಣಿಕೆಯ ಅಧಿಕಾರಿ, ಸಿಬ್ಬಂದಿಗಳ ನಡುವೆ ಕೆಲವರಿಗೆ ಆರೋಗ್ಯದ ತೊಂದರೆ, ಇನ್ನು ಕೆಲವರಿಗೆ ಆಸಕ್ತಿಯ ಕೊರತೆ, ಇನ್ನು ಕೆಲವರಿಗೆ ಸ್ವಂತ ಉದ್ಯಮದ ತಲೆಬಿಸಿ, ಉಳಿದಂತೆ ಕಂಪ್ಯೂಟರೀಕರಣದ ವಾಸನೆ ಇನ್ನೂ ಕೂಡ ಬಹುತೇಕರ ತಲೆಗೆ ಹತ್ತಿಲ್ಲ ಎಂದರೆ ತಪ್ಪಾಗಲಾರದು.
ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಇದ್ದ ಸಾವಿರಾರು ಸಂಖ್ಯೆಯ ಸ್ಥಿರ ದೂರವಾಣಿಗಳು ಸಂಚಾರಿ ದೂರವಾಣಿ ಬರುತ್ತಲೇ ಸಂಖ್ಯೆ ಕ್ಷೀಣಿಸತೊಡಗಿದ್ದು ಒಂದೆಡೆಯಾದರೆ ಇನ್ನೊಂದೆಡೆ ಬಿಎಸ್‍ಎನ್‍ಎಲ್ ಸಂಸ್ಥೆಯ ನೌಕರರ ನಿರ್ಲಕ್ಷ್ಯಕ್ಕೆ ಒಳಗಾಗಿ ಸೇವೆಯ ತೊಡಕಿನೊಂದಿಗೆ ಸಾವಿರಾರು ದೂರವಾಣಿ ಪೆಟ್ಟಿಗೆಗಳು ಕಛೇರಿಗೆ ಮರಳುವ ಪರಿಸ್ಥಿತಿ ಉಂಟಾಗಿರುವದು ಇತಿಹಾಸದ ಪುಟಕ್ಕೆ ಸೇರಿದ ವಿಷಯ ಎನ್ನಬಹುದು. ದೂರಸಂಪರ್ಕದ ದರಪಟ್ಟಿ ಒಂದೆಡೆ ಇಳಿದಿದ್ದು ಇನ್ನೊಂದೆಡೆ ಇಡೀ ಇಲಾಖೆ ಕಂಪ್ಯೂಟರೀಕರಣಗೊಂಡಿದ್ದರೂ ಅದೇ ಹಳೆಯ ಸಿಬ್ಬಂದಿಗಳ ಸಂಖ್ಯೆ ಮಾತ್ರ ಇನ್ನೂ ಹಾಗೆಯೇ ಉಳಿದಿರುವದು ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ.
ಈ ಇಲಾಖೆಯಲ್ಲಿ ಸರಿಯಾಗಿ ಪಾವತಿಯಾಗುವದು ಎರಡೇ ಎರಡು ವಿಷಯವಾಗಿದ್ದು ಅಧಿಕಾರಿ, ನೌಕರರ ಸಂಬಳ, ಇನ್ನೊಂದು ದೂರವಾಣಿ ಗ್ರಾಹಕರು ಪಾವತಿಸಬೇಕಾದ ಮಾಸಿಕ ಶುಲ್ಕ ಮಾತ್ರ ಸಮರ್ಪಕವಾಗಿ ವಿಲೇವಾರಿಯಾಗುತ್ತಿರುವುದು ಖಚಿತಗೊಂಡ ಮಾಹಿತಿಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 70 ಸಾವಿರಕ್ಕೂ ಅಧಿಕ ಸ್ಥಿರ ದೂರವಾಣಿಗಳು ವಿವಿಧ ಕಾರಣಗಳಿಂದ ಕಡಿತಗೊಂಡು ಇದೀಗ ಅರ್ಧದಷ್ಟಕ್ಕೆ ಇಳಿದಿದ್ದು ಒಂದೆಡೆಯಾದರೆ, ಮೊಬೈಲ್ ದೂರವಾಣಿಗಳ ಸಂಖ್ಯೆ ಮಾತ್ರ ಲಕ್ಷಗಟ್ಟಲೆ ಸಂಖ್ಯೆಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 120 ಕ್ಕೂ ಅಧಿಕ ಮೊಬೈಲ್ ಟವರ್‍ಗಳು ನಿರ್ಮಾಣ ಗೊಂಡಿದ್ದು ಅಂದಾಜು 2 ಲಕ್ಷದ 65 ಸಾವಿರಕ್ಕೂ ಅಧಿಕ ಬಿಎಸ್‍ಎನ್‍ಎಲ್ ಮೊಬೈಲ್ ಸಿಮ್‍ಗಳು ಮಾರಾಟವಾಗಿರುವದು ದಾಖಲೆಗಳಲ್ಲಿ ಕಾಣಬಹುದು. ಆದರೆ ಸೇವೆ ಮಾತ್ರ ಬಹುತೇಕ ಕ್ಷೀಣ ಗೊಂಡಿದ್ದು ಎಲ್ಲೆಡೆ ಕಂಡುಬಂದಿದೆ. ಮೊಬೈಲ್ ಟವರ್‍ಗಳನ್ನು ಉನ್ನತೀಕರಣಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿರುವದೇ ಎಲ್ಲಾ ಧಾವಂತಕ್ಕೆ ಕಾರಣವಾಗಿದೆ.
ಇಷ್ಟೊಂದು ಮೊಬೈಲ್‍ಗಳು ಸ್ಥಳೀಯವಾಗಿ ಕಾರ್ಯಾಚರಣೆ ಗೊಳ್ಳುತ್ತಿದ್ದರೆ ಹೊರ ಭಾಗದಿಂದ ಆಗಮಿಸುವ ಪ್ರವಾಸಿಗರ ಲಕ್ಷಗಟ್ಟಲೆ ಮೊಬೈಲ್‍ಗಳು ಇದೇ ಟವರ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸ ಬೇಕಾಗುತ್ತದೆ. ಮೊಬೈಲ್ ಟವರ್‍ಗಳ ಉನ್ನತೀಕರಣ ಆಗದ ಹಿನ್ನೆಲೆಯಲ್ಲಿ ಒತ್ತಡಗಳ ನಡುವೆ ಮೊಬೈಲ್ ಗ್ರಾಹಕನ ಬವಣೆ ಹೇಳತೀರದು.
ಸಿಗ್ನಲ್ ವೀಕ್, ಒಂದು ವೇಳೆ ಸಂಪರ್ಕ ದೊರೆತರೆ ಒನ್‍ವೇ ಸ್ಪೀಚ್, ಈ ನಡುವೆ ಮಾತನಾಡುತ್ತಿದ್ದಂತೆಯೇ ಸಂಪರ್ಕ ಕಡಿತಗೊಳ್ಳುವದು. ಒಟ್ಟಾರೆ ಮೊಬೈಲ್ ಗ್ರಾಹಕ ಮಾತ್ರ ತಲೆ ಚಚ್ಚಿಕೊಂಡು ಮತ್ತೆ ಸ್ಥಿರ ದೂರವಾಣಿಯ ಮೊರೆ ಹೋಗುವ ದುಸ್ಥಿತಿ ಎದುರಾಗಿರುವದು ದುರಂತ ಎನ್ನಬಹುದು.
ದಿನನಿತ್ಯದ ಜಂಜಾಟದ ನಡುವೆ ಈ ಸಮಸ್ಯೆ ಬಗ್ಗೆ ಬಿಎಸ್‍ಎನ್‍ಎಲ್ ಅಧಿಕಾರಿಗಳನ್ನು ಸಂಪರ್ಕಿಸಲು ಬಹುತೇಕ ಮೊಬೈಲ್ ಗ್ರಾಹಕ ತಲೆ ಕೆಡಿಸಿಕೊಳ್ಳದಿರುವದೇ ಇಲಾಖೆಯ ಅಧಿಕಾರಿಗಳಿಗೆ ಒಂದು ರೀತಿಯ ವರದಾನ ನೀಡಿದಂತಾಗಿದೆ ಎನ್ನಬಹುದು.
ಇನ್ನೊಂದೆಡೆ ಮನಸ್ಸು ಮಾಡಿ ದೂರು ನೀಡಿದರೆ ತನ್ನದು ಮಾರ್ಕೆಟಿಂಗ್ ವಿಭಾಗ ನೀವು ಸರ್ವೀಸ್ ವಿಭಾಗಕ್ಕೆ ಸಂಪರ್ಕಿಸಿ ಎನ್ನುವ ಸಬೂಬು ಕೇಳುವಂತಾಗಿರುವದು ಸಾಮಾನ್ಯವಾಗಿದೆ. ಸರ್ವೀಸ್ ವಿಭಾಗದಿಂದ ಮಾತ್ರ ನೋ ರಿಪ್ಲೈ ಬರುವದರೊಂದಿಗೆ ಗ್ರಾಹಕ ಮಾತ್ರ ಸುಸ್ತಾಗುವ ಪರಿಸ್ಥಿತಿ ಎದುರಾಗು ವದು ಇತ್ತೀಚಿನ ಬೆಳವಣಿಗೆ.
ಭಾರತ್ ಸಂಚಾರ್ ನಿಗಮ ಬಹುತೇಕ ಬೋತ್ ಸೈಡ್ ನಾಟ್ ಲಿಸನಿಂಗ್ (ಬಿಎಸ್‍ಎನ್‍ಎಲ್) ಎಂಬ ಅನ್ವರ್ಥ ನಾಮಕ್ಕೆ ಬದಲಾಗಿದೆಯೇ ಎಂಬ ಚಿಂತೆ ಗ್ರಾಹಕನಿಗೆ ಎದುರಾಗಿದ್ದು ಸೇವೆ ಹಾಗೂ ವಿಶ್ವಾಸಾರ್ಹತೆಗೆ ಹೆಸರಾಗಿದ್ದ ಸಂಸ್ಥೆ ಮತ್ತೆ ತನ್ನ ಗ್ರಾಹಕನಿಗೆ ಉತ್ತಮ ಸೇವೆ ನೀಡುವತ್ತ ಚಿಂತನೆ ಮಾಡಬೇಕಾಗಿದೆ ಎನ್ನುವದೇ ಈ ವರದಿಯ ಆಶಯವಾಗಿದೆ.